ನವದೆಹಲಿ:ಟೋಕಿಯೋದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಕುಸ್ತಿಪಟು ರವಿ ಕುಮಾರ್ ದಹಿಯಾಗೆ ದೆಹಲಿ ಸರ್ಕಾರ ವಿಶೇಷ ಗೌರವ ಸಲ್ಲಿಕೆಗೆ ಮುಂದಾಗಿದೆ.
ರವಿ ಕುಮಾರ್ ದಹಿಯಾ ಅವರು ದೆಹಲಿಯಲ್ಲಿ ಓದಿದ್ದ ಶಾಲೆಗೆ ಅವರದ್ದೇ ಹೆಸರನ್ನಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ಆದಿಶ್ ನಗರದಲ್ಲಿರುವ ದೆಹಲಿ ಸರ್ಕಾರಿ ಶಾಲೆಗೆ ರವಿ ಕುಮಾರ್ ದಹಿಯಾ ಅವರ ಹೆಸರು ಇಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ ದಹಿಯಾ ಅವರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿ ಸರ್ಕಾರವು ಈ ನಿರ್ಧಾರ ಪ್ರಕಟಿಸಿದೆ. ಸೋನಿಪತ್‌ನ ಹಳ್ಳಿಯೊಂದಕ್ಕೆ ಸೇರಿದ ದಹಿಯಾ, ಆದರ್ಶ್ ನಗರದಲ್ಲಿ ಬಾಲಕರ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 23 ವರ್ಷದ ಕುಸ್ತಿಪಟು ರವಿ ಕುಮಾರ್ ದಹಿಯಾ, 57 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ರಷ್ಯಾದ ಜಾವೂರ್ ಉಗುವ್ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಸುಶೀಲ್ ಕುಮಾರ್ ನಂತರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಎರಡನೇ ಕುಸ್ತಿಪಟು ಎನಿಸಿಕೊಂಡಿದ್ದರು.