ನವದೆಹಲಿ:ಒಲಿಂಪಿಯನ್ ಮತ್ತು 1970 ರ ಏಷ್ಯನ್ ಗೇಮ್ಸ್ 4x100 ಮೀ ರಿಲೇ ಕಂಚಿನ ಪದಕ ವಿಜೇತ ಕರ್ನಾಟಕದ ಕೆನ್ನೆತ್ ಪೊವೆಲ್ ಅವರು ವಯೋಸಹಜ ಕಾರಣದಿಂದಾಗಿ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇದಕ್ಕೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಸಂತಾಪ ಸೂಚಿಸಿದೆ.
ಕರ್ನಾಟಕದ ಗಡಿ ಜಿಲ್ಲೆಯಾದ ಕೋಲಾರದಲ್ಲಿ 1940 ರಲ್ಲಿ ಜನಿಸಿದ್ದ ಕೆನ್ನೆತ್ ಪೊವೆಲ್, ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. 1960 ರ ದಶಕದಲ್ಲಿ ದೇಶದ ಅಗ್ರ ಓಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 1964ರ ಟೋಕಿಯೊ ಒಲಿಂಪಿಕ್ಸ್ನಲ್ಲಿ 4x100 ಮೀಟರ್ಸ್ ರಿಲೇ ಓಟದಲ್ಲಿ ಭಾರತ ತಂಡ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.