ಭುವನೇಶ್ವರ: ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದ ಅಥ್ಲೀಟ್ ದ್ಯುತಿ ಚಾಂದ್, ತರಬೇತಿ ವೆಚ್ಚ ಭರಿಸಲು ಬೇರೆ ದಾರಿಯಿಲ್ಲದೇ ತಮ್ಮಲ್ಲಿರುವ ಬೆಲೆ ಬಾಳುವ ಬಿಎಂಡಬ್ಲು ಕಾರು ಮಾರಾಟ ಮಾಡಲು ನಿರ್ಧರಿಸಿದ್ದರು.
ಈ ವಿಚಾರ ಅಲ್ಲಿನ ಸರ್ಕಾರ ಹಾಗೂ ದ್ಯುತಿ ಚಾಂದ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಒಡಿಶಾ ಸರ್ಕಾರ 2005ರಿಂದ ಇಲ್ಲಿಯವರೆಗೆ ದ್ಯುತಿ ಚಾಂದ್ ಅವರಿಗೆ ತರಬೇತಿಗಾಗಿ 4.09 ಕೋಟಿ ರೂ ಖರ್ಚು ಮಾಡಿದ್ದು, ಜೊತೆಗೆ 3 ಕೋಟಿ ರೂ ನಗದು ಬಹುಮಾನವನ್ನೂ ನೀಡಿದೆ ಎಂದು ಹೇಳಿತ್ತು. ಒಡಿಶಾ ಕಲ್ಲಿದ್ದಲು ಕಾರ್ಪೋರೇಷನ್ನಲ್ಲಿ ಗ್ರೂಪ್-ಎ ಹುದ್ದೆಯನ್ನೂ ನೀಡಿ, ಈ ಮೂಲಕ 84,604 ರೂ ವೇತನ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರ ನೀಡಿತ್ತು.
ಈ ವಿಷಯವನ್ನಿಟ್ಟುಕೊಂಡು ಪ್ರತಿಕ್ರಿಯಿಸಿರುವ ಅಥ್ಲೀಟ್, ಒಡಿಶಾ ಸರ್ಕಾರ ನನಗೆ ಅವಮಾನ ಮಾಡ್ತಿದ್ದು, ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ತರಬೇತಿಗೆ ನನಗೆ ಹಣದ ಅವಶ್ಯಕತೆ ಇದ್ದ ಕಾರಣ ಬಿಎಂಡಬ್ಲ್ಯೂ ಕಾರು ಮಾರಾಟ ಮಾಡಲು ನಿರ್ಧರಿಸಿದ್ದೆ. ಈ ವಿಷಯವನ್ನು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದೆ. ಆದರೆ ಅದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ನನ್ನ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದ ಮಾಹಿತಿ ಡಿಲೀಟ್ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.