ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ವಿರುದ್ಧ ಸರ್ಬಿಯಾದ ನೊವಾಕ್ ಜೊಕೋವಿಕ್ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ತಮ್ಮ 3ನೇ ಫ್ರೆಂಚ್ ಓಪನ್ ಪ್ರಶಸ್ತಿ ಮತ್ತು 23ನೇ ಪುರುಷರ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ಶಿಪ್ಅನ್ನು ಜೊಕೋವಿಕ್ ಮುಡಿಗೇರಿಸಿಕೊಂಡರು.
ಪ್ಯಾರಿಸ್‌ನ ರೋಲ್ಯಾಂಡ್ ಗ್ಯಾರೋಸ್ ಕ್ರೀಡಾಂಗಣದಲ್ಲಿ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕ್ಯಾಸ್ಪರ್ ರೂಡ್ ಅವರನ್ನು 7-6(1), 6-3, 7-5 ಸೆಟ್‌ಗಳಿಂದ ಸೋಲಿಸಿ 36 ವರ್ಷದ ಜೊಕೋವಿಕ್ ದಾಖಲೆ ಬರೆದರು. ನೊವಾಕ್ ಜೊಕೋವಿಕ್ ಅವರಿಗೆ ಇದು 34ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಹಾಗೂ 7ನೇ ಫ್ರೆಂಚ್ ಓಪನ್ ಫೈನಲ್ ಆಗಿತ್ತು.
ರೂಡ್ ಅವರನ್ನು ಮಣಿಸುವ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ಅತ್ಯಧಿಕ 23 ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆಯನ್ನು ಜೊಕೋವಿಕ್ ತಮ್ಮ ಹೆಸರಿಗೆ ಸೇರಿಕೊಂಡರು. 22 ಗ್ರ್ಯಾನ್‌ಸ್ಲಾಮ್ ಗೆದ್ದಿದ್ದ ಜೊಕೋವಿಕ್ ಮತ್ತು ರಫೆಲ್ ನಡಾಲ್ ಸರಿಸಮ ದಾಖಲೆಯನ್ನು ಹೊಂದಿದ್ದರು. ಈಗ 23ನೇ ಗ್ರ್ಯಾನ್‌ಸ್ಲಾಮ್ ಗೆದ್ದು ಜೊಕೋವಿಕ್ ಪರಾಕ್ರಮ ಮರೆದರು.
ಅಲ್ಲದೇ, ಮೂರನೇ ಫ್ರೆಂಚ್ ಓಪನ್ ಟೆನಿಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ಪುರುಷರ ಟೆನಿಸ್‌ನಲ್ಲಿ ಇದುವರೆಗೆ ಕಂಡಿರುವ ಏಕೈಕ ಅತ್ಯಂತ ಯಶಸ್ವಿ ಆಟಗಾರ ಎಂಬ ಹೆಗ್ಗಳಿಗೆಗೂ ಪಾತ್ರರಾದರು. 2016ರಲ್ಲಿ ಆ್ಯಂಡಿ ಮರ್ರೆ ವಿರುದ್ಧ ಹಾಗೂ 2021ರಲ್ಲಿ ಸ್ಟೆಫನಸ್ ಸಿಸಿಪಸ್ ಅವರನ್ನು ಮಣಿಸಿ ಪ್ರಶಸ್ತಿ ಎತ್ತಿದ್ದರು. ಅಷ್ಟೇ ಅಲ್ಲ, ನಾಲ್ಕು ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಪ್ರತಿಯೊಂದನ್ನು ಕನಿಷ್ಠ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದ ವಿಶಿಷ್ಟ ದಾಖಲೆಯನ್ನೂ ಜೊಕೋವಿಕ್ ಬರೆದಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ 10, ವಿಂಬಲ್ಡನ್‌ನಲ್ಲಿ ಏಳು ಮತ್ತು ಯುಎಸ್ ಓಪನ್‌ನಲ್ಲಿ ಮೂರು ಟ್ರೋಫಿಗಳನ್ನು ಸರ್ಬಿಯಾದ ಆಟಗಾರ ಮುಡಿಗೇರಿಸಿಕೊಂಡಿದ್ದಾರೆ. ಈಗ ಫ್ರೆಂಚ್ ಓಪನ್ನಲ್ಲೂ ಮೂರು ಪ್ರಶಸ್ತಿಗಳನ್ನು ಎತ್ತಿ ಹಿಡಿದರು. ಕಳೆದ 20 ಸ್ಲಾಮ್‌ಗಳಲ್ಲಿ 11ರಲ್ಲಿ ಟ್ರೋಫಿಯನ್ನು ಹಿಡಿದಿದ್ದಾರೆ. ಒಟ್ಟಾರೆ ಜೊಕೋವಿಕ್ ತಮ್ಮ ವೃತ್ತಿಜೀವನದಲ್ಲಿ 94 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕೋವಿಡ್ ಲಸಿಕೆಯನ್ನು ಪಡೆಯದ ಕಾರಣ ಎರಡು ಮೇಜರ್‌ಗಳಲ್ಲಿ ಸರ್ಬಿಯಾದ ಸ್ಟಾರ್ ಆಟಗಾರರ ಭಾಗವಹಿಸಲಿಲ್ಲ ಎಂಬುವುದು ಗಮನಾರ್ಹವಾಗಿದೆ. ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು 2021ರ ಜನವರಿಯಲ್ಲಿ ಜೊಕೋವಿಕ್ ಅವರನ್ನು ಆಸ್ಟ್ರೇಲಿಯಾದಿಂದ ಗಡೀಪಾರು ಮಾಡಲಾಯಿತು. ಕಳೆದ ವರ್ಷದ ಯುಎಸ್ ಓಪನ್‌ಗೆ ಮುಂಚಿತವಾಗಿ ಅಮೆರಿಕಕ್ಕೆ ಹಾರಾಟ ಮಾಡಲು ಅವರಿಗೆ ಅನುಮತಿಸಿರಲಿಲ್ಲ.
ಇದನ್ನೂ ಓದಿ:Hockey Junior Asia Cup 2023: ಚೊಚ್ಚಲ ಕಪ್ ಗೆದ್ದ ಭಾರತೀಯ ವನಿತೆಯರ ತಂಡ