ಸಿನ್ಸಿನಾಟಿ :ಇಲ್ಲಿನ ಸೆಂಟರ್ ಕೋರ್ಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ವಿಶ್ವ ನಂಬರ್ 1 ಆಟಗಾರ ಕಾರ್ಲೋಸ್ ಅಲ್ಕರಾಜ್ ಮಣಿಸಿ ಸಿನ್ಸಿನಾಟಿ ಮಾಸ್ಟರ್ಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ರೋಚಕ ಫೈನಲ್ ಹಣಾಹಣಿಯಲ್ಲಿ ಯುವ ಆಟಗಾರ ಅಲ್ಕರಾಜ್ಗೆ ತಿರುಗೇಟು ನೀಡಿದ ಜೊಕೊವಿಕ್ 5-7, 7-6(7), 7-6(4) ಸೆಟ್ಗಳ ಅಂತರದ ಗೆಲುವು ಸಾಧಿಸಿದರು.
ಅತ್ಯದ್ಭುತ ಪ್ರದರ್ಶನ ನೀಡಿದ ಜೊಕೊವಿಕ್ ಇತ್ತೀಚಿನ ದಿನಗಳಲ್ಲಿನ ಅತಿ ರೋಚಕ ಪಂದ್ಯವೊಂದರಲ್ಲಿ ಮೇಲುಗೈ ಸಾಧಿಸಿ ಅಲ್ಕರಾಜ್ ವಿರುದ್ಧ ವಿಂಬಲ್ಡನ್ ಓಪನ್ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. 36 ವರ್ಷದ ಹಿರಿಯ ಆಟಗಾರ ತಮ್ಮ 39ನೇ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಜಯಿಸಿ ಸಂಭ್ರಮಿಸಿದರು. ಅಲ್ಕರಾಜ್ ವಿರುದ್ಧ ಮೊದಲ ಸೆಟ್ನ ಹಿನ್ನಡೆ ಬಳಿಕ ಸಿಡಿದೆದ್ದು, ನಂತರದ ಎರಡೂ ಸೆಟ್ಗಳಲ್ಲಿ ಪ್ರಾಬಲ್ಯ ಸಾಧಿಸಿದರು.
ನಿರ್ಣಾಯಕ ಮೂರನೇ ಸೆಟ್‌ನಲ್ಲಿ 5-4ರ ಮುನ್ನಡೆಯೊಂದಿಗೆ ಪ್ರಶಸ್ತಿಯ ಸಮೀಪದಲ್ಲಿದ್ದ ನೊವಾಕ್ ಸರ್ವ್ ಮಾಡುವಾಗ ಕೊಂಚ ಎಡವಿದರು. ಒಟ್ಟಾರೆ ಮೂರು ಗಂಟೆ 49 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಕೊನೆಗೂ ಜೊಕೊವಿಕ್ ಗೆಲುವಿನ ನಗೆ ಬೀರಿದರು. ಇಬ್ಬರೂ ಆಟಗಾರರು ಅದ್ಭುತ ಶಾಟ್‌ಮೇಕಿಂಗ್ ಮತ್ತು ಮಾನಸಿಕ ಸಾಮರ್ಥ್ಯ ಪ್ರದರ್ಶಿಸಿದರು.
ಮೊದಲ ಸೆಟ್ನಿಂದಲೂ ಉಭಯ ಆಟಗಾರರು ಪ್ರತಿ ಅಂಕಕ್ಕೂ ಬಿಗುವಿನ ಪ್ರದರ್ಶನ ತೋರಿದರು. 62 ನಿಮಿಷಗಳ ಅವಧಿಯಲ್ಲಿ, ಇಬ್ಬರೂ ಮುನ್ನಡೆ ಸಾಧಿಸುವ ಅವಕಾಶ ಪಡೆದರು. 2-4 ರಿಂದ ಹಿನ್ನಡೆ ಅನುಭವಿಸಿದ್ದ ಅಲ್ಕರಾಜ್ 7-5ರ ಅಂತರದಲ್ಲಿ ಸೆಟ್ ಗೆದ್ದರು. ಬಳಿಕ ತಿರುಗೇಟು ನೀಡಿದ ಜೊಕೊವಿಕ್ ತಮ್ಮ ಸುದೀರ್ಘ ಅನುಭವದೊಂದಿಗೆ ಆಕ್ರಮಣಕಾರಿ ಆಟ ತೋರಿದರು. 7-6(7)ರಿಂದ ಎರಡನೇ ಸೆಟ್ ಜಯಿಸಿ ಪಂದ್ಯವನ್ನು ನಿರ್ಣಾಯಕ ಸೆಟ್ ಹಂತಕ್ಕೆ ಕೊಂಡೊಯ್ದರು. ಅಂತಿಮ ಸೆಟ್ ಕೂಡ ಒಮ್ಮೆ 3-3ರಲ್ಲಿ ಸಮಬಲದಲ್ಲಿ ಮುಂದುವರೆದಿತ್ತು, ಅಂತಿಮವಾಗಿ 7-6(4) ರ ಅಂತರದ ಗೆಲುವು ದಾಖಲಿಸಿದ ಜೊಕೊವಿಕ್ ಅಂಗಳದಲ್ಲಿ ಮಲಗಿ ಸಂಭ್ರಮಿಸಿದರು.