ನವದೆಹಲಿ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದ ಭಾರತದ ಹೈಜಂಪರ್ ಶರದ್ ಕುಮಾರ್ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಎರಡು ತಿಂಗಳ ಕಾಲ ವಿಶ್ರಾಂತಿ ಜೊತೆಗೆ ಔಷಧಗಳನ್ನು ತೆಗೆದುಕೊಂಡರೆ ಸಾಕು ಎಂದು ಸೂಚಿಸಿದ್ದಾರೆ.
29 ವರ್ಷದ ಭಾರತೀಯ ಅಥ್ಲೀಟ್ ಸೆಪ್ಟೆಂಬರ್ 16ರಂದು ಎದೆ ನೋವಿನ ಕಾರಣ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯರು ಹೃದಯದಲ್ಲಿ ಊತ ಕಾಣಿಸಿದೆ ಎಂದು ತಿಳಿಸಿದ್ದರು.
ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಅವರು ಮತ್ತೆ ವಾರದ ನಂತರ ಬೇರೆ ಕೆಲವು ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿರುವುದರಿಂದ ಶರದ್ ನಿರಾಳರಾಗಿದ್ದಾರೆ.
ಪರೀಕ್ಷೆಗಳ ವರದಿಗಳ ನಂತರ ವೈದ್ಯರು ಎರಡು ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಔಷಧಗಳನ್ನು ಕಟ್ಟುನಿಟ್ಟಾಗಿ ತೆಗೆದಕೊಳ್ಳಲು ತಿಳಿಸಿದ್ದಾರೆ ಎಂದು ಸೋಮವಾರ ಶರದ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.
"ಅದೃಷ್ಟವಶಾತ್, ನನಗೆ ಯಾವುದೇ ಶಸ್ತ್ರಚಿಕಿತ್ಸೆ ಆದರೆ, ನನ್ನ ಕ್ರೀಡಾ ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿ ನಾನು ಅದರ ಬಗ್ಗೆಯೇ ಚಿಂತಿಸುತ್ತಿದ್ದೆ. ಈಗ ನನಗೆ ತುಂಬಾ ಸಮಾಧಾನವಾಗಿದೆ " ಎಂದು ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಹೇಳಿದ್ದಾರೆ.
ಕುಮಾರ್ ಅವರ ಬಾಲ್ಯದಲ್ಲಿ ತಪ್ಪು ಪೋಲಿಯೋ ಔಷಧದಿಂದಾಗಿ ಎಡಗಾಲಿನಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅವರು ಕಳೆದ ತಿಂಗಳು ಟೋಕಿಯೋದಲ್ಲಿ ನಡೆದ ಟಿ-42 ಫೈನಲ್‌ನಲ್ಲಿ 1.83 ಮೀಟರ್ನ ಜಿಗಿತದೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದರು. 2014 ಮತ್ತು 2018ರ ಏಷ್ಯನ್ ಪ್ಯಾರಾ ಗೇಮ್ಸ್ ಮತ್ತು 2019ರಲ್ಲಿ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇದನ್ನು ಓದಿ:IPLನ ಮೂರು ಯಶಸ್ವಿ ತಂಡಗಳ ಪರ ಆಡಿದ ಶ್ರೇಯಕ್ಕೆ ಪಾತ್ರರಾದ ಉತ್ತಪ್ಪ