ನವದೆಹಲಿ:ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ನಿಖತ್ ಜರೀನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಕ್ಸಿಂಗ್ ಗ್ಲೌಸ್ನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾ ಪಟುಗಳು ಪ್ರಧಾನಿ ಮೋದಿ ಅವರನ್ನು ಶನಿವಾರ ಭೇಟಿ ಮಾಡಿದ್ದರು. ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಸಾಧಕ ಪಟುಗಳಿಗೆ ಆತಿಥ್ಯ ನೀಡಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಬಾಕ್ಸರ್ ನಿಖತ್ ಜರೀನ್ ಪ್ರಧಾನಿಗೆ ಗ್ಲೌಸ್ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಈ ಬಗ್ಗೆ ಬಾಕ್ಸರ್ ನಿಖತ್ ಟ್ವಿಟ್ ಮಾಡಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ಬಾಕ್ಸರ್‌ಗಳು ಸಹಿ ಮಾಡಿದ ಬಾಕ್ಸಿಂಗ್ ಗ್ಲೌಸ್ಗಳನ್ನು ಉಡುಗೊರೆಯಾಗಿ ನೀಡಿರುವುದಕ್ಕೆ ಗೌರವವಿದೆ. ಈ ಅದ್ಭುತ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು. ದೇಶಕ್ಕೆ ಹೆಮ್ಮೆ ತಂದ ನನ್ನ ಸಹ ಆಟಗಾರರೊಂದಿಗೆ ಅದ್ಭುತ ದಿನವನ್ನು ಕಳೆದಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಆಗಿರುವ ನಿಖತ್ ಜರೀನ್, ಬರ್ಮಿಂಗ್ಹ್ಯಾಮ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬಾಕ್ಸಿಂಗ್ನ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಬಂಗಾರದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಒಟ್ಟಾರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಸೇರಿದಂತೆ 61 ಪದಕಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ:ಮೋದಿ ಕೊರಳಿಗೆ ಸಾಂಪ್ರದಾಯಿಕ ಅಸ್ಸಾಂ ಗಮ್ಚಾ ತೊಡಿಸಿದ ಓಟಗಾರ್ತಿ ಹಿಮಾ ದಾಸ್