ಹ್ಯಾಂಗ್‌ಝೌ (ಚೀನಾ): 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಸೆ.23 ರಿಂದ ಆರಂಭವಾಗಿದ್ದು ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನ ಮರುಪಂದ್ಯದಲ್ಲಿ ಭಾರತದ ಅಗ್ರ ಬಾಕ್ಸರ್ ಆಗಿ ಹೊರಹೊಮ್ಮಿದ ನಿಖತ್ ಜರೀನ್ ಅವರು ವಿಯೆಟ್ನಾಂನ ಥಿ ಟಾಮ್ ನ್ಗುಯೆನ್ ಅವರನ್ನು 5-0 ಅಂತರದಿಂದ ಸೋಲಿಸಿ ಮಹಿಳೆಯರ 50 ಕೆಜಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದರೆ, ಪ್ರೀತಿ ಪವಾರ್ 54 ಕೆಜಿ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.
ಎರಡು ಬಾರಿಯ ವಿಶ್ವ ಚಾಂಪಿಯನ್ ಜರೀನ್, ಎರಡು ಬಾರಿಯ ಏಷ್ಯನ್ ಚಾಂಪಿಯನ್ ನ್ಗುಯೆನ್ ಅವರಿಗೆ ಒಂದು ಅಂಕದ ಅವಕಾಶ ಕೊಡದೆ ಮಣಿಸಿದರು. ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಜರೀನ್ 50 ಕೆಜಿ ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೈ ಪಡೆದರು. "ನಾನು ಏಕಪಕ್ಷೀಯ ಪಂದ್ಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ನನ್ನ ಯೋಜನೆಯಂತೆ ಆಟವನ್ನು ಮುಂದುವರಿಸಿದೆ. ಎದುರಾಳಿಗೆ ಅವಕಾಶ ಕೊಡದೇ ಮುಂದುವರೆಯುವುದು ನನ್ನ ಯೋಜನೆಯಾಗಿತ್ತು, ಅದರಂತೆ ಯಶಸ್ವಿಯಾದೆ" ಎಂದು ಜರೀನ್ ಸಂತಸ ಹಂಚಿಕೊಂಡರು.
ಆರಂಭದ ಎರಡು ಸುತ್ತುಗಳಲ್ಲಿ ಜರೀನ್ ನಿಖರವಾದ ಪಂಚ್‌ಗಳನ್ನು ಹೊಡೆದು ಎದುರಾಳಿಯನ್ನು ಮಣಿಸಿದರು. ಅವರು ಎಷ್ಟು ವೇಗವಾಗಿ ತಮ್ಮ ಮುಷ್ಠಿಯಿಂದ ಹೊಡೆಯುತ್ತಿದ್ದರೆಂದರೆ, ಆರಂಭಿಕ ಸುತ್ತಿನಲ್ಲಿ 30 ಸೆಕೆಂಡುಗಳಲ್ಲಿ ಎರಡು ಬಾರಿ ನ್ಗುಯೆನ್‌ಗೆ ಎಂಟು ಕೌಂಟ್ಗಳನ್ನು ರೆಫರಿ ನೀಡಿದರು. ನ್ಗುಯೆನ್ ಎರಡನೇ ಸುತ್ತಿನಲ್ಲಿ ಆಕ್ರಮಣ ಮಾಡಲು ಪ್ರಯತ್ನಿಸಿದರು. ಆದರೆ ಜರೀನ್ ಬಲವಾದ ಪಂಚ್‌ಗಳೊಂದಿಗೆ ಅವರನ್ನು ಸೋಲಿಸಿದರು. ಇದರಿಂದ ವಿಯೆಟ್ನಾಂ ಬಾಕ್ಸರ್‌ನ ಮೇಲೆ ಮೂರನೇ ಬಾರಿ ಎಂಟು ಕೌಂಟ್ನ್ನು ರೆಫರಿ ನೀಡಿದರು.