ಕ್ರೀಡೆಯಲ್ಲಿ ಹೊಸ ಹೊಸ ವಿಧಾನಗಳ ಬಳಕೆ ಪರಿಚಯಕ್ಕೆ ಬರುವುದು ಸಾಮಾನ್ಯವಾಗಿದೆ. ಅದರಂತೆ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲೂ ಇತ್ತೀಚೆಗೆ ಹೊಸ ಸರ್ವ್ ಒಂದು ಹೆಚ್ಚು ಬಳಕೆಗೆ ಬಂದಿದೆ. ಇದು ತುಂಬಾ ಪರಿಣಾಮಕಾರಿಯಾಗಿದ್ದು, ಸ್ಪಷ್ಟವಾಗಿ ಸರ್ವ್ ಮಾಡಬಲ್ಲವನು ಎದುರಾಳಿಯನ್ನು ಸುಲಭವಾಗಿ ಮಣಿಸಲು ಸಾಧ್ಯವಿತ್ತು. ಇದರಿಂದ ಇತ್ತೀಚಿನ ಪಂದ್ಯಗಳಲ್ಲಿ ಇದು ಆಟಗಾರರ ಅಸ್ತ್ರವಾಗಿ ಮಾರ್ಪಟ್ಟಿತ್ತು. ಇದನ್ನೇ ಬಳಸಿ ಎದುರಾಳಿಯನ್ನು ಕಟ್ಟಿ ಹಾಕುವ ಪ್ರವೃತ್ತಿ ಬೆಳೆಯಿತು.
ಈಗ ಈ ಸರ್ವ್ನ್ನು ಬ್ಯಾನ್ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ. ಇದು ಕ್ರೀಡಾ ಸ್ಫೂರ್ತಿ ಆಗುವುದಿಲ್ಲ ಎಂದು ಅಭಿಪ್ರಾಯಗಳು ಬ್ಯಾಡ್ಮಿಂಟನ್ ಕ್ರೀಡಾ ಲೋಕದಲ್ಲಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಡೆಯುತ್ತಿರುವ ಸುದಿರ್ಮನ್ ಕಪ್ನಲ್ಲಿ ಇದರ ಬಳಕೆಗೆ ನಿಷೇಧ ಹೇರಲಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಈ ಸರ್ವ್ ಮೇಲೆ ಮಧ್ಯಂತರ ನಿಷೇಧವನ್ನು ಹೊರಡಿಸಿದೆ.
ಹೊಸ 'ಸ್ಪಿನ್ ಸರ್ವ್' ಮೊದಲು ಮಾರ್ಚ್‌ನಲ್ಲಿ ಪೋಲಿಷ್ ಓಪನ್ 2023 ಪಂದ್ಯಾವಳಿಗಳಲ್ಲಿ ಅಳವಡಿಸಲಾಗಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ನ ಗ್ರೆಗ್ ಮೈರ್ಸ್ ಮತ್ತು ಜೆನ್ನಿ ಮೂರ್ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಈ ಸರ್ವ್ನ್ನು ಪರಿಚಯಿಸಿದ್ದಾರೆ. ಈ ಜೋಡಿ ಯೂಟ್ಯೂಬ್ ಚಾನಲ್ನ್ನು ಹೊಂದಿದ್ದು ಈ ಬಗ್ಗೆ ಅದರಲ್ಲಿ ಮಾಹಿತಿ ನೀಡುತ್ತಿದ್ದಾರೆ.
ಬ್ಯಾಡ್ಮಿಂಟನ್ ವಲಯದಲ್ಲಿ ಪ್ರತಿಕ್ರಿಯೆ ಏನು?:ವೀಕ್ಷಕ ವಿವರಣೆಗಾರ ಗಿಲ್ ಕ್ಲಾರ್ಕ್ ಮತ್ತು ಡ್ಯಾನಿಶ್ ಅನುಭವಿ ಎಚ್‌ಕೆ ವಿಟಿಂಗ್‌ಹಸ್ ಅವರು ಈ ಬಗ್ಗೆ ಮಾತನಾಡಿ, "ಇದು ಪಂದ್ಯದ ಮೇಲಿನ ಕುತೂಹಲವನ್ನು ಕಡಿಮೆ ಮಾಡುತ್ತದೆ. ಆಟ ಬೇಗ ಮುಗಿಯುವುದರಿಂದ ಜನ ಮನ್ನಣೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇವಲ ಸರ್ವ್ಗಳಲ್ಲೇ ಪಂದ್ಯಗಳು ಮುಗಿದು ಹೋಗುತ್ತವೆ" ಎಂದಿದ್ದಾರೆ.
ಬಿಡಬ್ಲ್ಯೂಎಫ್ ನಿರ್ಧಾರ ಏನು?: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಸದ್ಯಕ್ಕೆ ಅಂದರೆ ಮೇ 29 ರ ವರೆಗೆ ಈ ಹೊಸ 'ಸ್ಪಿನ್ ಸರ್ವ್' ಬಳಕೆಗೆ ತಡೆಯೊಡ್ಡಿದೆ. ಆದರೆ ಇದನ್ನು ನಿಷೇಧಿಸಲು ಬ್ಯಾಡ್ಮಿಂಟನ್ ಕಾನೂನುಗಳಿಗೆ ಪ್ರಾಯೋಗಿಕ ಬದಲಾವಣೆಯ ಪ್ರಸ್ತಾಪವನ್ನು ಅನುಮೋದಿಸಿದೆ. ಬ್ಯಾಡ್ಮಿಂಟನ್‌ನ ಬಿಡಬ್ಲ್ಯೂಎಫ್ ಕಾನೂನುಗಳ ವಿಭಾಗ 4.1 ರ 9.1.5 ರ ತಿದ್ದುಪಡಿಯ ಬಗ್ಗೆ ಅನುಮೋದನೆಗೆ ತೆಗೆದುಕೊಳ್ಳಲಾಗಿದೆ.
ಯಾವೆಲ್ಲಾ ಪಂದ್ಯಕ್ಕೆ ನಿಷೇಧ ಇದೆ: ಸದ್ಯಕ್ಕೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಮಧ್ಯಂತರ ನಿಷೇಧವು 14 ಮೇ 2023 ಭಾನುವಾರದಿಂದ ಪ್ರಾರಂಭವಾಗಿರುವ ಸುದಿರ್ಮನ್ ಕಪ್ ಫೈನಲ್ಸ್ 2023 ಮತ್ತು ಮುಂದಿನ ವಾರ ಮಲೇಷ್ಯಾ ಮಾಸ್ಟರ್ಸ್ 2023 ಸೇರಿದಂತೆ ಎಲ್ಲಾ ಬಿಡಬ್ಲ್ಯೂಎಫ್ನ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಜಾರಿಯಲ್ಲಿದೆ.
ಬಿಡಬ್ಲ್ಯೂಎಫ್ ಅಧ್ಯಕ್ಷರು ಹೇಳಿದ್ದೇನು?: ಬಿಡಬ್ಲ್ಯೂಎಫ್ ಅಧ್ಯಕ್ಷ ಪೌಲ್-ಎರಿಕ್ ಹೋಯರ್, ಬಿಡಬ್ಲ್ಯೂಎಫ್ ಆಟದಲ್ಲಿ ಹೊಸತನವನ್ನು ಸೃಷ್ಟಿಸುವ ಆಟಗಾರರನ್ನು ಸ್ವಾಗತಿಸುತ್ತದೆ. ಸ್ಪರ್ಧಾತ್ಮಕ ಪ್ರಯೋಜನವನ್ನು ಸೃಷ್ಟಿಸಲು ತಂತ್ರಗಳನ್ನು ಪ್ರಯೋಗಿಸುತ್ತದೆ. ಬಿಡಬ್ಲ್ಯೂಎಫ್ ಅಥ್ಲೀಟ್‌ಗಳ ಆಯೋಗ ಸೇರಿದಂತೆ ಬ್ಯಾಡ್ಮಿಂಟನ್ ಸಮುದಾಯದಿಂದ ಹಲವಾರು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದೇವೆ. ಈ 'ಸ್ಪಿನ್ ಸರ್ವ್' ಆಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ 'ಸ್ಪಿನ್ ಸರ್ವ್' 'ಸಿಡೆಕ್ ಸರ್ವ್' ಗೆ ಅನೇಕ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ ಎಂದು ಆಂತರಿಕವಾಗಿ ಗಮನಿಸಲಾಗಿದೆ. ಹೀಗಾಗಿ ಇದನ್ನು ಅನುಮತಿಸಲಾಗುವುದಿಲ್ಲ ಎಂದಿದ್ದಾರೆ.
ಆದ್ದರಿಂದ, 27 ಮೇ 2023 ನಡೆಯುವ ಬಿಡಬ್ಲ್ಯೂಎಫ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಮಾಲೋಚನೆ ನಡೆಯುವವರೆಗೆ 'ಸ್ಪಿನ್ ಸರ್ವ್' ಅನ್ನು ಅನುಮತಿಸದಿರಲು ತಜ್ಞರ ಸಮಿತಿಯು ಶಿಫಾರಸು ಮಾಡಿದೆ. ಹೀಗಾಗಿ ನಡೆಯುತ್ತಿರುವ ಸುದಿರ್ಮನ್ ಕಪ್ ಮತ್ತು ಮುಂದಿನ ಮಲೇಷ್ಯಾ ಮಾಸ್ಟರ್ಸ್ 2023ನಲ್ಲಿ ಇದಕ್ಕೆ ಮಧ್ಯಂತರ ನಿಷೇಧವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ನಿಷೇಧ ಶಾಶ್ವತವಾಗಿ ಉಳಿಯುತ್ತದೆಯೇ ಎಂಬುದು ಈ ತಿಂಗಳ ಅಂತ್ಯದಲ್ಲಿ ತಿಳಿಯಲಿದೆ.
ಇದನ್ನೂ ಓದಿ:ನಿಧಾನಗತಿ ಬೌಲಿಂಗ್: ಕೆಕೆಆರ್ ನಾಯಕ ರಾಣಾಗೆ 24 ಲಕ್ಷ ರೂ. ದಂಡ, ಪಂದ್ಯ ನಿಷೇಧ ಭೀತಿ