ಹೈದರಾಬಾದ್: ಭಾರತದ 'ಚಿನ್ನದ ಹುಡುಗ' ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಅವರನ್ನು ವಿಶ್ವ ಅಥ್ಲೆಟಿಕ್ಸ್ 2023ರ ವರ್ಷದ ಪುರುಷರ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಗುರುವಾರ ನಾಮನಿರ್ದೇಶನ ಮಾಡಲಾಗಿದೆ.
ಚೋಪ್ರಾ ಈ ವರ್ಷಾರಂಭದಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಡೈಮಂಡ್ ಲೀಗ್ 2023ರಲ್ಲಿ ಬೆಳ್ಳಿ ಗೆದ್ದರೆ, ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಜಯಿಸಿದ್ದರು. ಇದಕ್ಕೂ ಮೊದಲು ವಿಶ್ವ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ತೋರಿದ್ದರು. 2018ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾಡ್ನಲ್ಲೂ ಬಂಗಾರಕ್ಕೆ ಮುತ್ತಿಕ್ಕಿದ್ದರು. ಏಸ್ ಶೂಟರ್ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ನೀರಜ್ ಚೋಪ್ರಾ.
ಭಾರತಕ್ಕಾಗಿ ಅನೇಕ ಐತಿಹಾಸಿಕ ಪ್ರಥಮಗಳನ್ನು ಸಾಧಿಸಿದ ಚೋಪ್ರಾ ಅವರೊಂದಿಗೆ 11 ಕ್ರೀಡಾಪಟುಗಳನ್ನು ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಶಾರ್ಟ್ಲಿಸ್ಟ್ ಆಗಿದ್ದಾರೆ. ಇದಕ್ಕೆ ವರ್ಲ್ಡ್ ಅಥ್ಲೆಟಿಕ್ಸ್ ಕೌನ್ಸಿಲ್ ಮತ್ತು ವರ್ಲ್ಡ್ ಅಥ್ಲೆಟಿಕ್ಸ್ ಫ್ಯಾಮಿಲಿ ಮತ ಹಾಕುತ್ತದೆ. ಅಷ್ಟೇ ಅಲ್ಲ, ಅಭಿಮಾನಿಗಳೂ ಮತ ಹಾಕಬಹುದು.
ಸ್ಪರ್ಧೆಯಲ್ಲಿ ಯಾರಿದ್ದಾರೆ?: ನೀರಜ್ ಚೋಪ್ರಾ, ಅಮೆರಿಕದ ಶಾಟ್‌ಪುಟ್ ವಿಶ್ವ ಚಾಂಪಿಯನ್ ರಯಾನ್ ಕ್ರೌಸರ್, ಸ್ವೀಡೆನ್ನ ಪೋಲ್ ವಾಲ್ಟ್ ವಿಶ್ವ ಚಾಂಪಿಯನ್ ಮೊಂಡೋ ಡುಪ್ಲಾಂಟಿಸ್, ಮೊರಾಕೋದ ಸ್ಟೀಪಲ್‌ಚೇಸ್ ವಿಶ್ವ ಚಾಂಪಿಯನ್ ಸೌಫಿಯಾನ್ ಎಲ್ ಬಕ್ಕಲಿ, ನಾರ್ವೆಯ 5000 ಮೀ ವಿಶ್ವ ಚಾಂಪಿಯನ್ ಜಾಕೋಬ್ ಇಂಗೆಬ್ರಿಗ್ಟ್ಸೆನ್, ಕೀನ್ಯಾದ ಮ್ಯಾರಥಾನ್ ಚಾಂಪಿಯನ್ ಕೆಲ್ವಿನ್ ಕಿಪ್ಟಮ್, ಕೆನಡಾದ ಡೆಕಾಥ್ಲಾನ್ ವಿಶ್ವ ಚಾಂಪಿಯನ್ ಪಿಯರ್ಸ್ ಲೆಪೇಜ್, ಅಮೆರಿಕದ 100 ಮೀ ವಿಶ್ವ ಚಾಂಪಿಯನ್ ನೋಹ್ ಲೈಲ್ಸ್, ಸ್ಪೇನ್ನ ನಡಿಗೆ ವಿಶ್ವ ಚಾಂಪಿಯನ್ ಅಲ್ವಾರೊ ಮಾರ್ಟಿನ್, ಗ್ರೀಕ್ನ ಮಿಲ್ಟಿಯಾಡಿಸ್ ಲಾಂಗ್ ಜಂಪರ್ ಟೆಂಟೊಗ್ಲೋ ಮತ್ತು ನಾರ್ವೆಯ ಹರ್ಡಲ್ಸ್ ಅಥ್ಲೀಟ್ ಕಾರ್ಸ್ಟನ್ ವಾರ್ಹೋಮ್.