ಹಂಗೇರಿ, ಯರೋಪ್: ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಇತಿಹಾಸ ಬರೆದಿದ್ದಾರೆ (Neeraj Chopra Javelin Throw). ಸರಿ ಸುಮಾರು 50 ವರ್ಷಗಳ ಬಳಿಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿರುವ ರಾಷ್ಟ್ರೀಯ ಅಥ್ಲೆಟಿಕ್ಸ್ ಸೆಂಟರ್‌ನಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ 88.17 ಮೀಟರ್ ದೂರ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಚಿನ್ನ: ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಆಗಿರುವ ಈ ಆಟಗಾರ ಈ ಟೂರ್ನಿಯ ಮೊದಲು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ ಒಟ್ಟು ಆರು ಸುತ್ತುಗಳಿದ್ದು, ನೀರಜ್ ಎರಡನೇ ಸುತ್ತಿನಲ್ಲಿಯೇ 88.17 ಮೀಟರ್ ದೂರ ಎಸೆದಿದ್ದರು. ಆಗಿನಿಂದಲೂ ಪಾಯಿಂಟ್ಸ್ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಅವರು ಚಿನ್ನಕ್ಕೆ ಮುತ್ತಿಟ್ಟರು. ನೀರಜ್ ಅವರ ಆರು ಪ್ರಯತ್ನಗಳಲ್ಲಿ 83.38ಮೀ, 88.17ಮೀ, 86.32ಮೀ, 84.64ಮೀ, 87.73ಮೀ ಮತ್ತು 83.98 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.
ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗೆದ್ದರು. ಜೆಕ್ ಗಣರಾಜ್ಯದ ಜಾಕುಬ್ ವೆಡ್ಲೆಚ್ ಅವರು 86.67 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ನೀರಜ್ ಅವರೊಂದಿಗೆ ಇತರ ಇಬ್ಬರು ಭಾರತೀಯ ಆಟಗಾರರಾದ ಡಿಪಿ ಮನು ಮತ್ತು ಕಿಶೋರ್ ಜೆನಾ ಫೈನಲ್‌ನಲ್ಲಿ ಇದ್ದರು. ಕಿಶೋರ್ 84.77 ಮೀಟರ್ ಎಸೆದು ಐದನೇ ಸ್ಥಾನ ಪಡೆದರೆ, ಡಿಪಿ ಮನು 84.14 ಮೀಟರ್ ಎಸೆದು ಆರನೇ ಸ್ಥಾನ ಪಡೆದರು.
ನೀರಜ್ ಚೋಪ್ರಾ ತಂದೆ ಹೇಳಿದ್ದು ಹೀಗೆ: ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕದ ಕುರಿತು ಮಾತನಾಡಿದ ಅಥ್ಲೀಟ್ ತಂದೆ ಸತೀಶ್ ಕುಮಾರ್, “ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಪಡೆದಿರುವುದು ನಮ್ಮ ದೇಶಕ್ಕೆ ಇದು ಅತ್ಯಂತ ಹೆಮ್ಮೆಯ ಕ್ಷಣ, ನೀರಜ್ ಭಾರತಕ್ಕೆ ಹಿಂತಿರುಗಿ ಬಂದ ನಂತರ ನಾವು ಸಂಭ್ರಮಿಸುತ್ತೇವೆ" ಎಂದು ಹೇಳಿದರು.
50 ವರ್ಷಗಳ ನಂತರ ಚಿನ್ನ:ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ 1983 ರಿಂದ ನಡೆಯುತ್ತಿದ್ದು, ಮೊದಲ ಬಾರಿಗೆ ಭಾರತೀಯ ಕ್ರೀಡಾಪಟು ಚಿನ್ನದ ಪದಕ ಗೆದ್ದಿದ್ದಾರೆ. ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಒಟ್ಟಾರೆ ಮೂರನೇ ಪದಕಕ್ಕೆ ಮುತ್ತಿಕ್ಕಿದೆ. ನೀರಜ್ ಕಳೆದ ಸೀಸನ್ನಲ್ಲಿ ಬೆಳ್ಳಿ ಗೆದ್ದಿದ್ದರು. ಮಹಿಳಾ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ 20 ವರ್ಷಗಳ ಹಿಂದೆ 2003 ರಲ್ಲಿ ಪ್ಯಾರಿಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಭಿನವ್ ಬಿಂದ್ರಾ ನಂತರ ನೀರಜ್ ಚೋಪ್ರಾ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ನೀರಜ್: ಶುಕ್ರವಾರ ನಡೆದ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲಿ ನೀರಜ್ 88.77 ಮೀಟರ್ ಎಸೆದು ಫೈನಲ್ ಪ್ರವೇಶಿಸಿದ್ದರು. ಈ ಸಾಧನೆಯೊಂದಿಗೆ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ನೀರಜ್ ಯಶಸ್ವಿಯಾಗಿದ್ದಾರೆ.
ಪ್ರಮುಖ ಸ್ಪರ್ಧೆಗಳಲ್ಲಿ ನೀರಜ್ ಚೋಪ್ರಾ ಅವರ ದಾಖಲೆಗಳು ಇಂತಿವೆ..
*ವಿಶ್ವ ಚಾಂಪಿಯನ್‌ಶಿಪ್ (ಬುಡಾಪೆಸ್ಟ್ 2023) - ಚಿನ್ನದ ಪದಕ (88.17 ಮೀ)
*ವಿಶ್ವ ಚಾಂಪಿಯನ್‌ಶಿಪ್ (ಒರೆಗಾನ್ 2022) - 2 ನೇ ಸ್ಥಾನ, ಬೆಳ್ಳಿ ಪದಕ (88.39 ಮೀ)
*ಡೈಮಂಡ್ ಲೀಗ್ (ಸ್ಟಾಕ್ಹೋಮ್ 2022) - 2 ನೇ ಸ್ಥಾನ (89.94 ಮೀ)