ಸ್ಟಾಕ್‌ಹೋಮ್: ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆಯುತ್ತಿರುವ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಸ್ಪರ್ಧೆಯ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವೇಳೆ ಅವರು 89.94 ಮೀಟರ್‌ವರೆಗೆ ಜಾವೆಲಿನ್ ಎಸೆದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಆದರೆ, ಅವರು 90 ಮೀಟರ್ ಮಾರ್ಕ್ ತಲುಪಲು ಸಾಧ್ಯವಾಗಲಿಲ್ಲ.
ತಪ್ಪಿದ 90 ಮೀಟರ್ ಗುರಿ: ನೀರಜ್ ಚೋಪ್ರಾ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀಟರ್‌ಗಳ ಅದ್ಭುತ ಎಸೆತದೊಂದಿಗೆ ತಮ್ಮ ಆಟವನ್ನು ಪ್ರಾರಭಿಸಿದರು. ಅವರು ಕೇವಲ 6 ಸೆಂ.ಮೀ ಅಂತರದಲ್ಲಿ 90 ಮೀಟರ್ ತಲುಪುವ ಅವಕಾಶವನ್ನು ಕಳೆದುಕೊಂಡರು. ಈ 90 ಮೀಟರ್ ದೂರವನ್ನು ಚಿನ್ನದ ಪದಕಕ್ಕಾಗಿ ನಿಗದಿಪಡಿಸಲಾಗಿತ್ತು. ಆದರೆ ನೀರಜ್ ಚೋಪ್ರಾ 90 ಮೀಟರ್ ಮಾರ್ಕ್ ಮುಟ್ಟಲು ಸಾಧ್ಯವಾಗದ ಹಿನ್ನೆಲೆ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
89.94 ಮೀಟರ್‌ವರೆಗೆ ಜಾವೆಲಿನ್ ಎಸೆದು ದಾಖಲೆ:ನೀರಜ್ ಇತ್ತೀಚೆಗೆ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿರುವುದು ಗೊತ್ತೇ ಇದೆ. ಈಗ ಡೈಮಂಡ್ ಲೀಗ್‌ನಲ್ಲಿ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 89.94 ಮೀಟರ್‌ಗಳನ್ನು ಎಸೆಯುವ ಮೂಲಕ 16 ದಿನಗಳಲ್ಲಿ ತಮ್ಮ ರೆಕಾರ್ಡ್ನ್ನು ತಾವೇ ಮುರಿದಿದ್ದಾರೆ. ಈ ಲೀಗ್‌ನಲ್ಲಿ 89.94 ಜಾವೆಲಿನ್ ಎಸೆದ ಬಳಿಕ ಕ್ರಮವಾಗಿ 84.37ಮೀ, 87.46ಮೀ, 84.77ಮೀ, 86.67ಮೀ, 86.84ಮೀ ಜಾವೆಲಿನ್ ಎಸೆದು ಮಿಂಚಿದರು.
ಓದಿ:ಡೈಮಂಡ್ ಲೀಗ್ಗಾಗಿ ಎದುರು ನೋಡುತ್ತಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ
ಈವೆಂಟ್‌ನ ಮುಗಿದ ನಂತರ ಮಾತನಾಡಿದ ನೀರಜ್ ಚೋಪ್ರಾ, ನಾನು ಇಂದು 90 ಮೀಟರ್‌ಗಿಂತ ಹೆಚ್ಚು ಎಸೆಯಬಹುದು ಎಂದು ಭಾವಿಸಿದ್ದೆ. ಆದರೆ ನಾನು ಸ್ವಲ್ಪ ಎಡವಿದ್ದೇನೆ. ಆದ್ರೂ ಪರವಾಗಿಲ್ಲ. ಏಕೆಂದರೆ ಈ ವರ್ಷ ನನಗೆ ಹೆಚ್ಚಿನ ಸ್ಪರ್ಧೆಗಳಿವೆ ಎಂದು ಅವರು ಹೇಳಿದರು. ನೀರಜ್ ಚೋಪ್ರಾ ತಮ್ಮ ಎದುರಾಳಿ ಗ್ರಾನಡಾದ ಆಂಡರ್ಸನ್ ಪೀಟರ್ಸ್ ಈ ಋತುವಿನಲ್ಲಿ ಎರಡು ಬಾರಿ ಜಾವೆಲಿನ್ ಅನ್ನು 90 ಮೀಟರ್‌ಗಿಂತಲೂ ಹೆಚ್ಚು ದೂರಕ್ಕೆ ಎಸೆದಿದ್ದಾರೆ. ಈ ಪೈಕಿ ದೋಹಾ ಲೆಗ್ ನಲ್ಲಿ 93.07 ಮೀಟರ್ ಹಾಗೂ ನೆದರ್ ಲ್ಯಾಂಡ್ನ ಹೆಂಗೆಲೊದಲ್ಲಿ ನಡೆದ ಸ್ಪರ್ಧೆಯಲ್ಲಿ 90.75 ಮೀಟರ್ ಎಸೆದಿದ್ದಾರೆ.
ನೀರಜ್ ಚೋಪ್ರಾ ಈ ತಿಂಗಳಲ್ಲಿ ಎರಡು ಬಾರಿ ಪೀಟರ್ಸ್ರನ್ನು ಸೋಲಿಸಿರುವುದು ದೊಡ್ಡ ವಿಷಯ. ತುರ್ಕುದಲ್ಲಿ ಮೊದಲ ಬಾರಿಗೆ, ಮೂರನೇ ಸ್ಥಾನದಲ್ಲಿದ್ದ ಗ್ರಾನಡಾದ ಕ್ರೀಡಾಪಟು ಪೀಟರ್ಸ್ನನ್ನು ಸೋಲಿಸಿದರು. ಬಳಿಕ ಕೋರ್ಟೆನಿ ಗೇಮ್ಸ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ತೇವ ಮತ್ತು ಜಾರು ಪರಿಸ್ಥಿತಿಗಳ ನಡುವೆಯೂ 86.69 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.
ಚೋಪ್ರಾ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನ ಮೊದಲ ಮೂರು ಸ್ಥಾನಗಳಲ್ಲಿ ಬಂದ ಭಾರತದ ಎರಡನೇ ಅಥ್ಲೀಟ್ ಆಗಿದ್ದಾರೆ. ಇದಕ್ಕೂ ಮುನ್ನ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಈ ಸಾಧನೆ ಮಾಡಿದ್ದರು. 2014 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿಕಾಸ್ ಗೌಡ 2017 ರಲ್ಲಿ ನಿವೃತ್ತರಾದರು. ಅವರು ತಮ್ಮ ಅಥ್ಲೆಟಿಕ್ ವೃತ್ತಿಜೀವನದಲ್ಲಿ 4 ಬಾರಿ ಡೈಮಂಡ್ ಲೀಗ್ ಸ್ಪರ್ಧೆಯ ಅಗ್ರ ಮೂರನೇ ಸ್ಥಾನದಲ್ಲಿದ್ದರು.
ಒಲಿಂಪಿಯನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ 7 ಬಾರಿ ಭಾಗವಹಿಸಿದ್ದರು. ಆದರೆ, ಈಗ ಅವರು ಮೊದಲ ಬಾರಿಗೆ ಅದರಲ್ಲಿ ಪದಕ ಗೆಲ್ಲಲು ಸಾಧ್ಯವಾಗಿದೆ. ನೀರಜ್ ಚೋಪ್ರಾ ಈಗ ಅಮೆರಿಕದ ಯುಜೀನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಕಾಯುತ್ತಿದ್ದಾರೆ. ಈ ಚಾಂಪಿಯನ್‌ಶಿಪ್ ಜುಲೈ 15-24ರವರೆಗೆ ನಡೆಯಲಿದೆ. ಅದೇ ಸಮಯದಲ್ಲಿ, ಡೈಮಂಡ್ ಲೀಗ್‌ನ ಮುಂದಿನ ಈವೆಂಟ್ ಈಗ ಆಗಸ್ಟ್ 10 ರಂದು ಮೊನಾಕೊದಲ್ಲಿ ನಡೆಯಲಿದೆ.
ವರದಿಯ ಪ್ರಕಾರ, ಜರ್ಮನಿಯ ಜೊಹಾನ್ಸ್ ವೆಟರ್ ಇದುವರೆಗೆ 90 ಮೀಟರ್‌ಗೂ ಹೆಚ್ಚು ಜಾವೆಲಿನ್ ಎಸೆದ ಕ್ರೀಡಾಪಟು. ಆದರೆ ಅವರು ಕೆಲವು ಸಮಯದಿಂದ ಫಿಟ್ ಆಗಿಲ್ಲ. ಇದರಿಂದಾಗಿ ಅವರ ಹೆಸರು ಪದಕದಲ್ಲಿ ಎಲ್ಲಿಯೂ ಕಾಣಸಿಗಲಿಲ್ಲ.