ನವದೆಹಲಿ:ವಿಶ್ವ ಅಥ್ಲೆಟಿಕ್ಸ್ ಬಿಡುಗಡೆ ಮಾಡಿರುವ ಪುರುಷರ ಜಾವಲಿನ್ ಥ್ರೋ ಶ್ರೇಯಾಂಕದಲ್ಲಿ 2022ರ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ವಿಶ್ವದ ನಂಬರ್ ಒನ್ ಎಸೆತ ಗಾರರಾಗಿ ಸ್ಥಾನ ಪಡೆದಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನೀರಜ್ ವಿಶ್ವದ ನಂಬರ್ 1 ಆಟಗಾರಾಗಿ ಹೊರ ಹೊಮ್ಮಿದ್ದಾರೆ. ಸದ್ಯ ಚೋಪ್ರಾ 1,455 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಗ್ರಾನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ (1,433) ಅವರಿಗಿಂತ 22 ಅಂಕ ಮುಂದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಜೆಕ್ ಗಣರಾಜ್ಯದ ಜಾಕೋಬ್ ವಡ್ಲೆಜ್ 1,416 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
25 ವರ್ಷದ ಚೋಪ್ರಾ ಕಳೆದ ವರ್ಷ ಆಗಸ್ಟ್ 30 ರಂದು ಬಿಡುಗಡೆಯಾಗಿದ್ದ ಜಾವಲಿನ್ ಥ್ರೋ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದರು. ಬಳಿಕ ಪೀಟರ್ಸ್ ಅನ್ನು ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಋತುವನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಿರುವ ಚೋಪ್ರಾ ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನ ಜಾವಲಿನ್ ಥ್ರೋ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ 88.67 ಮೀಟರ್ ದೂರದವರೆಗೆ ಥ್ರೋ ಮಾಡುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ 2022 ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದರು. ಲೀಗ್ನಲ್ಲಿ 89.63 ಮೀಟರ್‌ಗಳಷ್ಟು ದೂರಕ್ಕೆ ಜಾವಲಿನ್ ಎಸೆದು ಮೊದಲ ಸ್ಥಾನ ಪಡೆದಿದ್ದರು. ಈ ಮೂಲಕ ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ನಂತರ ಗಾಯದ ಸಮಸ್ಯೆಯಿಂದ ಕೆಲ ಪಂದ್ಯಗಳಿಂದ ದೂರಉಳಿದಿದ್ದರು.