ಜ್ಯೂರಿಚ್(ಸ್ವಿಟ್ಜರ್ಲೆಂಡ್): ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಜ್ಯೂರಿಚ್ ಡೈಮಂಡ್ ಲೀಗ್ನ ಜಾವೆಲಿನ್ ಎಸೆತದಲ್ಲಿ ಎರಡನೇ ಸ್ಥಾನ ಪಡೆದೆಕೊಂಡರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತದ ಮೂಲಕ ಚಿನ್ನ ಗೆದ್ದಿದ್ದ ಚೋಪ್ರಾ ಈ ಬಾರಿ ಡೈಮಂಡ್ ಲೀಗ್ನಲ್ಲಿ ಕೂದಲೆಳೆ ಅಂತರಲ್ಲಿ ಚಿನ್ನ ಪದಕವನ್ನು ತಪ್ಪಿಸಿಕೊಂಡರು. 85.71 ಮೀ ಎಸೆಯುವ ಮೂಲಕ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅಂಕ ವಿವರ: ಝೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 85.86 ಮೀ ಎಸೆದು ಮೊದಲ ಸ್ಥಾನ ಗಿಟ್ಟಿಸಿಕೊಂಡರು. ನೀರಜ್ ಚೋಪ್ರಾ 85.71 ಮೀ ಎಸೆದು 2ನೇ ಸ್ಥಾನ, ಹಾಗೆ ಜರ್ಮನಿಯ ಜೂಲಿಯನ್ ವೆಬರ್ 85.04 ಮೀ ಎಸೆದು ಮೂರನೇ ಸ್ಥಾನ ಪಡೆದರು.
ಹೀಗಿತ್ತು ಪೈಪೋಟಿ: ನೀರಜ್ ಚೋಪ್ರಾ ತಮ್ಮ ಮೊದಲ ಎಸೆತದಲ್ಲಿ 80.79 ಮೀಟರ್ ಎಸೆದು ಸ್ಫರ್ದೆ ಆರಂಭಿಸಿದರು. ಈ ವೇಳೆ ಲಿಥುವೇನಿಯಾದ ಎಡಿಸ್ ಮಾಟುಸೆವಿಸಿಯಸ್ 81.62 ಮೀ ಎಸೆದು ಮುನ್ನಡೆ ಸಾಧಿಸಿದರು. 2 ನೇ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 83.46 ಮೀ ಎಸೆದು ನೀರಜ್ ಚೋಪ್ರಾ ಮತ್ತು ಎಡಿಸ್ಗೆ ಸವಾಲೆಸೆದರು. 2 ನೇ ಸುತ್ತಿನಲ್ಲಿ ನೀರಜ್ ಎಸೆತ ಫೌಲ್ ಆಗಿದ್ದರಿಂದ ಎಡಿಸ್ಗಿಂತ ಕೆಳಕ್ಕಿಳಿದು 3 ನೇ ಸ್ಥಾನ ಪಡೆದರು. ನಂತರ ಜರ್ಮನಿಯ ಜೂಲಿಯನ್ ವೆಬರ್ 84.75 ಮೀ. ಎಸೆದಿದ್ದರು. ಈ ವೇಳೆ ನೀರಜ್ ತಮ್ಮ 3ನೇ ಪ್ರಯತ್ನದಲ್ಲಿ ಫೌಲ್ ಆಗಿದ್ದರಿಂದ ಒಮ್ಮೆಲೇ ನೀರಜ್ 5 ನೇ ಸ್ಥಾನಕ್ಕೆ ಕುಸಿತ ಕಂಡರು. ಬಳಿಕ ಜೂಲಿಯನ್ ವೆಬರ್ ಮುನ್ನಡೆಯೊಂದಿಗೆ ತಮ್ಮ ಮೂರನೆ ಸುತ್ತನ್ನು ಕೊನೆಗೊಳಿಸಿದರು.