ಕರಾಚಿ (ಪಾಕಿಸ್ತಾನ):ಮುಂದಿನಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಭಾರತದ ನೀರಜ್ ಚೋಪ್ರಾ ಮತ್ತು ನನ್ನ ನಡುವೆ ಕಠಿಣ ಪೈಪೋಟಿ ಏರ್ಪಡಲಿದೆ. ಆದರೆ ಯುರೋಪ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವುದು ಸಂತೋಷ ತಂದಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಸ್ಪರ್ಧಿ ಪಾಕಿಸ್ತಾನದ ಅರ್ಷದ್ ನದೀಮ್ ಹೇಳಿದರು.
"ನೀರಜ್ ಮತ್ತು ನಾನು ಆರೋಗ್ಯಕರ ಸ್ಪರ್ಧೆ ಹೊಂದಿದ್ದೇವೆ. ನಾವು ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತೇವೆ. ಪಾಕಿಸ್ತಾನ-ಭಾರತದ ಪೈಪೋಟಿ ಕೆಟ್ಟ ರೀತಿಯಲ್ಲಿ ಇಲ್ಲ. ಸಾಮಾನ್ಯವಾಗಿ ಯುರೋಪಿಯನ್ ಪ್ರಾಬಲ್ಯವಿರುವ ಸ್ಪರ್ಧೆಯಲ್ಲಿ ನಾವಿಬ್ಬರೂ ಮುಂಚೂಣಿಗೆ ಬಂದಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ" ಎಂದು ನದೀಮ್ ತಿಳಿಸಿದರು.
ಕಳೆದ ವರ್ಷ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90.18 ಮೀಟರ್ ದೂರ ಜಾವೆಲಿನ್ ಎಸೆದು ನದೀಮ್ ಚಿನ್ನ ಗೆದ್ದಿದ್ದರು. "ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಸ್ಪರ್ಧಿ ಚೋಪ್ರಾರ ವಿರುದ್ಧದ ಸೋಲು ನನಗೆ ಬೇಸರ ಉಂಟುಮಾಡಿಲ್ಲ" ಎಂದಿದ್ದಾರೆ. ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗಾಯದ ಕಾರಣ ನೀರಜ್ ಚೋಪ್ರಾ ಸ್ಪರ್ಧಿಸಿರಲಿಲ್ಲ. ಅಂದು ನದೀಮ್ ಯುರೋಪಿಯನ್ ರಾಷ್ಟ್ರಗಳ ಅಥ್ಲೀಟ್‌ಗಳನ್ನು ಮಣಿಸಿ ಚಿನ್ನ ಗೆದ್ದಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ನೀರಜ್ ನದೀಮ್ರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು.