ನವದೆಹಲಿ: ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ 118 ನೇ ಜನ್ಮ ವಾರ್ಷಿಕೋತ್ಸವ ಮತ್ತು 12 ನೇ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನದ ವಿಶೇಷ ದಿನದಂದು ಭಾರತೀಯ ಕ್ರೀಡಾಪಟುಗಳಿಗೆ ತಮ್ಮ ಎಕ್ಸ್ (ಹಿಂದಿನ ಟ್ವಿಟರ್)ಖಾತೆಯಲ್ಲಿ ಮೋದಿ ಶುಭ ಹಾರೈಸಿದ್ದಾರೆ. "ರಾಷ್ಟ್ರೀಯ ಕ್ರೀಡಾ ದಿನದಂದು, ಎಲ್ಲ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳು. ದೇಶಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಭಾರತವು ಹೆಮ್ಮೆಪಡುತ್ತದೆ. ಮೇಜರ್ ಧ್ಯಾನ್ ಚಂದ್ ಜಿ ಅವರ ಜನ್ಮದಿನದಂದು ನಮನ ಸಲ್ಲಿಸುತ್ತೇನೆ" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಕ್ರೀಡಾಸಚಿವ ಅನುರಾಗ್ ಠಾಕೂರ್ ದೆಹಲಿಯ ಜವಹಾರ್ ಲಾಲ್ ನೆಹರು ಕ್ರೀಡಾಂಗಣದ ಮುಂಬಾಗದಲ್ಲಿರುವ ಧ್ಯಾನ್ ಚಂದ್ ಪ್ರತಿಮೆಗೆ ನಮನ ಸಲ್ಲಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು "ದೆಹಲಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ #ರಾಷ್ಟ್ರೀಯ ಕ್ರೀಡಾ ದಿನದಂದು ಭಾರತೀಯ ಹಾಕಿಯ ಮಾಂತ್ರಿಕ, ಮೇಜರ್ ಧ್ಯಾನ್ ಚಂದ್ ಅವರಿಗೆ ನಮನ ಸಲ್ಲಿಸಿದೆ" ಎಂದು ಬರೆದುಕೊಂಡಿದ್ದಾರೆ.
ಇಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ. ಹಾಕಿಯಲ್ಲಿ ತಮ್ಮ ಕೈಚಳಕದಿಂದ "ಭಾರತದ ಹಾಕಿ ಮಾಂತ್ರಿಕ" ಎಂದೇ ಕರೆಯಲಾಗುತ್ತಿದೆ. 1928, 1932 ಮತ್ತು 1936 ರ ಒಲಿಂಪಿಕ್ಸ್ ಆವೃತ್ತಿಗಳಲ್ಲಿ ಚಿನ್ನ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದರು. ದೇಶಕ್ಕಾಗಿ 185 ಪಂದ್ಯಗಳಲ್ಲಿ ಅವರು ಭಾರತಕ್ಕಾಗಿ 570 ಗೋಲುಗಳನ್ನು ಗಳಿಸಿದ್ದಾರೆ. ಧ್ಯಾನ್ ಚಂದ್ ಅವರು ಯುನೈಟೆಡ್ ಪ್ರಾವಿನ್ಸ್ ತಂಡದಲ್ಲಿ ಹಾಕಿ ಆಡಿದರು, ಅಲ್ಲಿಂದ ಅವರು 1928 ರ ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ಗೆ ಹೋದ ಭಾರತೀಯ ತಂಡಕ್ಕೆ ಆಡಲು ಆಯ್ಕೆಯಾದರು.