ನವದೆಹಲಿ:ಭಾರತವನ್ನು ಹಾಕಿ ಕ್ರೀಡೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿದ್ದ ಧ್ಯಾನ್ಚಂದ್ ಅವರ 115ನೇ ವರ್ಷದ ಜನ್ಮದಿನದ ನಿಮಿತ್ತ ಇಡೀ ದೇಶದಲ್ಲಿ ಈ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ.
2012 ರಲ್ಲಿ ಭಾರತ ಸರ್ಕಾರ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಪರಿಚಯಿಸಿತ್ತು. ಇದು ದೇಶದಲ್ಲಿ ಕ್ರೀಡಾಭಿಮಾನಿಗಳನ್ನು ಆಕರ್ಷಿಸಿತ್ತು. ಕ್ರೀಡಾ ದಿನದ ಉದ್ದೇಶ ಕ್ರೀಡೆಯಿಂದಾಗುವ ಅನುಕೂಲಗಳನ್ನು ತಿಳಿಸಿ ರಾಷ್ಟ್ರವನ್ನು ಕ್ರೀಡಾಪ್ರೇಮ ರಾಷ್ಟ್ರವನ್ನಾಗಿ ಮಾಡುವುದಾಗಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಧ್ಯಾನ್ಚಂದ್ ಜನ್ಮದಿನವನ್ನು ಒಂದು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಈ ದಿನ ಆ ರಾಜ್ಯಗಳಲ್ಲಿ ಕಬಡ್ಡಿ, ಮ್ಯಾರಾಥಾನ್, ಕುಸ್ತಿ, ಬಾಕ್ಸಿಂಗ್,ಬ್ಯಾಸ್ಕೆಟ್ ಬಾಲ್, ಟೆನ್ನಿಸ್,ಫುಟ್ಬಾಲ್, ಹಾಗೂ ಕ್ರಿಕೆಟ್ ಆಟಗಳನ್ನು ಏರ್ಪಡಿಸಲಾಗುತ್ತದೆ. ಈ ದಿನ ರಾಜ್ಯದಲ್ಲಿನ ಉತ್ತಮ ಕ್ರೀಡಾಪಟುಗಳನ್ನು ಸಹ ಗುರುತಿಸಿ ಅವರಿಗೆ ಅಗತ್ಯ ನೆರವನ್ನು ನೀಡಲಾಗುತ್ತದೆ.
ದ್ಯಾನ್ ಚಂದ್ ಹಾಕಿ ಮಾಂತ್ರಿಕ
ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯವಾಗಿರುವ ಧ್ಯಾನ್ ಚಂದ್ ಅವರು ಭಾರತದಲ್ಲಷ್ಟೇ ಅಲ್ಲ ಪ್ರಂಪಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೂ ಧ್ಯಾನ್ ಚಂದ್ ಸರಿಗಟ್ಟುವ ಆಟಗಾರನೂ ಇಲ್ಲ ಎಂಬುದು ಸತ್ಯ ಸಂಗತಿ. ಆತನ ಆಟ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಅವರನ್ನು ಬೆರಗುಗೊಳಿಸಿತ್ತು .
1905 ಆಗಸ್ಟ್ 29ರಂದು ಅಲಹಾಬಾದ್‌ನಲ್ಲಿ ಹುಟ್ಟಿ ಬೆಳೆದ ಧ್ಯಾನ್ ಚಂದ್ 1928, 1932 ಹಾಗೂ 1936ರ ಒಲಿಂಪಿಕ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ನೆರವಾಗಿದ್ದರು. ಅವರ ಕಾಲಘಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ವಿಶ್ವಮಟ್ಟದಲ್ಲಿ ಭಾರತ ಅಧಿಪತ್ಯವನ್ನು ಸ್ಥಾಪಿಸಿತ್ತು. 1948ರಲ್ಲಿ ಕೊನೆಯ ಅಂತರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿರುವ ಧ್ಯಾನ್ ಚಂದ್ ದಾಖಲೆಯ 400ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ.
ದ್ಯಾನ್ ಚಂದ್ರಿಗೆ 1956ರಲ್ಲಿ ಭಾರತ ಸರ್ಕಾರ ದೇಶದ ಮೂರನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮ ಭೂಷಣ ನೀಡಿ ಗೌರವಿಸಿದೆ.