ಹ್ಯಾಂಗ್‌ಝೌ (ಚೀನಾ): ಭಾರತದ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅಕ್ಟೋಬರ್ 4 ರಂದು ಇಲ್ಲಿ ನಡೆಯುವ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಅರ್ಷದ್ ನದೀಮ್ ಅವರೊಂದಿಗೆ ಪೈಪೋಟಿಗೆ ಇಳಿಯಲಿದ್ದಾರೆ. ತಮ್ಮ ಈವೆಂಟ್ ಬಗ್ಗೆ ಸ್ವಲ್ಪ ಗಮನ ಹರಿಸುವುದಾಗಿ ನೀರಜ್ ಚೋಪ್ರಾ ಹೇಳಿಕೊಂಡಿದ್ದಾರೆ. ತಮ್ಮ ಗೆಲುವಿನ ಗುರಿಯ ಬಗ್ಗೆ ಹ್ಯಾಂಗ್‌ಝೌನಲ್ಲಿ ಸೇರಿದ್ದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತೊಡೆಸಂದು ಸೆಳೆತದ ನಡುವೆಯೂ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿರುವ ನೀರಜ್ ಚೋಪ್ರಾ, ತಮ್ಮ ಮನಸ್ಸನ್ನು ಈ ಗಾಯದಿಂದ ದೂರವಿಡಬೇಕಿದೆ. ಆಟದ ಮೇಲೆ ಹೆಚ್ಚು ಗಮನ ಕೊಡುವುದು ಒಳಿತು. ಈ ಮೂಲಕ ಎಲ್ಲ ರೀತಿಯಿಂದಲೂ ಏಷ್ಯನ್ ಗೇಮ್ಸ್ ಮೇಲೆ ಗಮನ ಹರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಜಾವೆಲಿನ್ ಥ್ರೋ ಪಟು ಅರ್ಷದ್ ನನ್ನೊಂದಿಗೆ ಆಡಿದಾಗಲೆಲ್ಲ ನಾನು ನನ್ನ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದೇನೆ. ಈವೆಂಟ್ನಲ್ಲಿ ಯಾವಾಗಲೂ ಅತ್ಯುತ್ತಮವಾದ ಕೊಡುಗೆಯನ್ನು ನೀಡುವುದು ನನ್ನ ಕೆಲಸ. ಹಾಗೆ ನನ್ನ ಗಮನ ಈವೆಂಟ್ ಮೇಲೆ ಕೇಂದ್ರೀಕೃತವಾಗಿರುತ್ತದೆಯೇ ಹೊರತು, ನನ್ನ ವಿರುದ್ಧ ಯಾರು ಆಡುತ್ತಿದ್ದಾರೆ ಎಂಬುದರ ಮೇಲೆ ಇರಲ್ಲ. ಯುರೋಪಿಯನ್ ಅಥ್ಲೀಟ್‌ಗಳು ಇರದೇ ಇರುವುದರಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿರುತ್ತದೆ. ಹಾಗಾಗಿ ಇಲ್ಲಿ ನನ್ನ ಹೋರಾಟ ನನ್ನ ವಿರುದ್ಧವೇ ಇರುತ್ತದೆ. ಉತ್ತಮ ಪ್ರದರ್ಶನ ತೋರುವುದು ನನ್ನ ಮುಂದಿರುವ ಆಯ್ಕೆ ಎಂದರು.