ಬರ್ಮಿಂಗ್ಹ್ಯಾಮ್: ಇಲ್ಲಿನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ಸಮಾರೋಪ ಸಮಾರಂಭಕ್ಕೆ ತೆರೆ ಬಿದ್ದಿದೆ. ಕಳೆದ 11 ದಿನಗಳಲ್ಲಿ 72 ದೇಶಗಳಿಂದ 4,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ನಾಲ್ಕು ವರ್ಷಗಳ ಬಳಿಕ ಅಂದ್ರೆ ಕಾಮನ್‌ವೆಲ್ತ್ ಗೇಮ್ಸ್ 2026ರ ಮುಂದಿನ ಆವೃತ್ತಿ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ನಡೆಯಲಿದೆ.
ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಒಟ್ಟು 61 ಪದಕಗಳನ್ನು ಗೆದ್ದಿದೆ. ಇದರಲ್ಲಿ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳು ಸೇರಿವೆ. ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್ 2018ರಲ್ಲಿ ಭಾರತ ಒಟ್ಟು 66 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 16 ಪದಕಗಳು ಶೂಟಿಂಗ್ನಲ್ಲಿ ಬಂದಿವೆ. ಈ ಬಾರಿ ಶೂಟಿಂಗ್ನ್ನು ಕೈಬಿಡಲಾಗಿದೆ. ಆದರೆ ಭಾರತ ಕೇವಲ ಐದು ಪದಕಗಳನ್ನು ಕಳೆದುಕೊಂಡಿದೆ. ಈ ಬಾರಿ ಭಾರತ ಲಾನ್ ಬಾಲ್, ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೀಟ್‌ಗಳಂತಹ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಸಂಪ್ರದಾಯದ ಪ್ರಕಾರ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟಕ್ಕೆ ತೆರೆ ಬಿದ್ದ ಬಳಿಕ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್‌ನ ಧ್ವಜವನ್ನು ಕೆಳಗಿಳಿಸಲಾಯಿತು. 2026ರ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾಕ್ಕೆ ಧ್ವಜ ಹಸ್ತಾಂತರಿಸಲಾಯಿತು.
ಪ್ರಿನ್ಸ್ ಎಡ್ವರ್ಡ್ ‘ಬರ್ಮಿಂಗ್ಹ್ಯಾಮ್ 2022 ಮುಚ್ಚಲಾಗಿದೆ ಎಂದು ಘೋಷಿಸಿದರು’. ಬಳಿಕ 2026 ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯಕ್ಕೆ ಔಪಚಾರಿಕ ಆಹ್ವಾನವನ್ನು ನೀಡಿದರು. ಕ್ರೀಡಾಕೂಟವನ್ನು ಘೋಷಿಸುತ್ತಿದ್ದಂತೆ ಬರ್ಮಿಂಗ್ಹ್ಯಾಮ್ನ ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿದವು. ಸಮಾರೋಪ ಸಮಾರಂಭದ ಪ್ರಮುಖ ಅಂಶವೆಂದರೆ ಭಾಂಗ್ರಾ ಮತ್ತು ಭಾರತೀಯ ಮೂಲದ ಗಾಯಕ ಸ್ಟೀವನ್ ಕಪೂರ್ ಅವರ 'ಅಪಾಚೆ ಇಂಡಿಯನ್' ಗೀತೆಗಳು ಮತ್ತು ನೃತ್ಯಗಳು.