ಯುಜೀನ್ (ಅಮೆರಿಕ): ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಎರಡನೇ ದಿನವಾದ ನಿನ್ನೆ 7.96 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದಿಂದ ಫೈನಲ್‌ನಲ್ಲಿ ಏಳನೇ ಸ್ಥಾನ ಗಳಿಸಿದರಾದರೂ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲರಾಗಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್ ಜಂಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಅಥ್ಲೀಟ್ ಆಗಿರುವ ಶ್ರೀಶಂಕರ್, ಶೋಪೀಸ್‌ನಲ್ಲಿ ಐತಿಹಾಸಿಕ ಪದಕದ ಭರವಸೆ ಮೂಡಿಸಿದ್ದರು. ಆದರೆ, ಫೈನಲ್‌ನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.
ಅವರು 7.96m ನ ಆರಂಭಿಕ ಜಿಗಿತ, 7.89m ನ ನಾಲ್ಕನೇ ಸುತ್ತಿನ ಪ್ರಯತ್ನ ಮತ್ತು 7.83m ನ ಕೊನೆಯ ಪ್ರಯತ್ನವನ್ನು ಮಾಡಿದ್ದರು. ಉಳಿದ ಮೂರು ಪ್ರಯತ್ನಗಳು ಫೌಲ್ ಆಗಿದ್ದವು. 23ರ ಹರೆಯದ ಆಟಗಾರ ಆರು ಪ್ರಯತ್ನಗಳಲ್ಲಿ 8 ಮೀಟರ್ ದಾಟಲು ಸಾಧ್ಯವಾಗದೇ ನಿರಾಸೆ ಅನುಭವಿಸಿದ್ದಾರೆ. ಮಾರ್ಚ್‌ನಿಂದ 8.17ಮೀ, 8.36ಮೀ, 8.31ಮೀ ಮತ್ತು 8.23ಮೀ ಜಿಗಿದು ವಿಶ್ವ ಚಾಂಪಿಯನ್‌ಶಿಪ್‌ಗೆ ಹೋಗುವ ಕನಸ್ಸನ್ನು ನನಸು ಮಾಡಿಕೊಂಡಿದ್ದರಾದರೂ ಇಲ್ಲಿ ಮುಗ್ಗರಿಸಿದ್ದಾರೆ.
ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ನಿಖರವಾಗಿ 8 ಮೀಟರ್‌ಗಳ ಅತ್ಯುತ್ತಮ ಜಿಗಿತದೊಂದಿಗೆ ಅವರು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಬಿ ಗುಂಪಿನಲ್ಲಿ ಎರಡನೇ ಮತ್ತು ಒಟ್ಟಾರೆ ಏಳನೇ ಸ್ಥಾನ ಪಡೆದಿದ್ದರು.