ಮುಂಬೈ:ಪ್ರತಿಷ್ಠಿತ ಎಫ್ 3 ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ಸರ್ವ ಭಾರತೀಯರ ತಂಡ ಎನ್ನುವ ಹಿರಿಮೆಗೆ ಮುಂಬೈ ಫಾಲ್ಕನ್ಸ್ ಪಾತ್ರವಾಗಲಿದೆ. ಜನವರಿ 29ರಿಂದ ದುಬೈನಲ್ಲಿ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದ್ದು, ಫಾಲ್ಕನ್ಸ್ ಇತಿಹಾಸ ಬರೆಯಲು ಸಜ್ಜಾಗಿದೆ.
ಕಳೆದ ವರ್ಷ ನಡೆದ ಉದ್ಘಾಟನಾ ಎಕ್ಸ್1 ಲೀಗ್‌ನಲ್ಲಿ ಬಹುತೇಕ ಎಲ್ಲಾ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ತಂಡವನ್ನು ಎಫ್2 ತಾರೆ ಜೆಹಾನ್ ದಾರೂವಾಲಾ ಹಾಗೂ ಬ್ರಿಟಿಷ್ ಎಫ್3 ರನ್ನರ್ ಅಪ್ ಬೆಂಗಳೂರಿನ ಖುಷ್ ಮೈನಿ ಮುನ್ನಡೆಸಲಿದ್ದಾರೆ ಎಂದು ಬುಧವಾರ ಮಾಧ್ಯಮ ಪ್ರಕಟಣೆ ಮೂಲಕ ತಂಡ ತಿಳಿಸಿದೆ.
ಮಾಜಿ ಎಫ್2 ಹಾಗೂ ಜಿಟಿ1 ರೇಸರ್ ಅರ್ಮಾನ್ ಇಬ್ರಾಹಿಂ ತಂಡದ ಮುಖ್ಯಸ್ಥರಾಗಿದ್ದು, 8 ಬಾರಿ ರಾಷ್ಟ್ರೀಯ ಚಾಂಪಿಯನ್ ರಯೋಮಂದ್ ಬನಾಜಿ ತಂಡದ ತಂತ್ರಗಾರಿಕೆ ಹಾಗೂ ಸಂವಹನ ಮುಖ್ಯಸ್ಥರಾಗಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ತಂಡ ಚಾಂಪಿಯನ್‌ಶಿಪ್ ಗೆಲ್ಲುವ ವಿಶ್ವಾಸದಲ್ಲಿದೆ.
"ಭಾರತೀಯ ಮೋಟಾರ್ ಸ್ಪೋರ್ಟ್ಸ್ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಗುರಿ. ಏಷ್ಯನ್ ಎಫ್3 ಕೇವಲ ಆರಂಭವಷ್ಟೇ" ಎಂದು ಕಳೆದ ವರ್ಷವಷ್ಟೇ ಸ್ಥಾಪನೆಗೊಂಡ ಮುಂಬೈ ಫಾಲ್ಕನ್ಸ್ ತಂಡದ ಮಾಲೀಕ ನವ್‌ಜೀತ್ ಗಧೋಕೆ ಹೇಳಿದ್ದಾರೆ. "ಜೆಹಾನ್ ಹಾಗೂ ಖುಷ್‌ರಂತಹ ಶ್ರೇಷ್ಠ ಚಾಲಕರು ನಮ್ಮ ತಂಡದಲ್ಲಿದ್ದಾರೆ. ಅತ್ಯುತ್ತಮ ಪ್ರದರ್ಶನ ತೋರಿ ಚಾಂಪಿಯನ್‌ಶಿಪ್ ಗೆಲ್ಲುವುದು ನಮ್ಮ ಗುರಿಯಾಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಸದ್ದಿಲ್ಲದೆ ನಾವು ಅಗತ್ಯ ತಯಾರಿ ನಡೆಸುತ್ತಿದ್ದೇವೆ ಹಾಗೂ ಅಂತಾರಾಷ್ಟ್ರೀಯ ಮಟ್ಟವನ್ನು ಪ್ರವೇಶಿಸಲು ನಾವು ದೊಡ್ಡ ಮಟ್ಟದಲ್ಲಿ ಸಿದ್ಧರಿದ್ದೇವೆ" ಎಂದು ಮುಂಬೈ ಫಾಲ್ಕನ್ಸ್ ತಂಡದ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ (ಸಿಇಒ) ಮೊಯಿದ್ ತುಂಗೇಕರ್ ನುಡಿದಿದ್ದಾರೆ.
ಏಷ್ಯನ್ ಎಫ್3 ಚಾಂಪಿಯನ್‌ಶಿಪ್, ಏಷ್ಯಾದ ಅತ್ಯಂತ ಸ್ಪರ್ಧಾತ್ಮಕ ರೇಸಿಂಗ್ ಸ್ಪರ್ಧೆಯಾಗಿದ್ದು, 9 ಬಲಿಷ್ಠ ತಂಡಗಳು ಅನೇಕ ಎಫ್2 ಹಾಗೂ ಎಫ್3 ಚಾಲಕರೊಂದಿಗೆ ಕಣಕ್ಕಿಳಿಯಲಿವೆ. ಕಳೆದ ವರ್ಷ ಈ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಇಬ್ಬರು ಚಾಲಕರು ಫಾರ್ಮುಲಾ 1ಗೆ ಬಡ್ತಿ ಪಡೆದಿದ್ದಾರೆ.
ಇದನ್ನೂ ಓದಿ:ಭಾರತ ತಂಡ ಗಬ್ಬಾದಲ್ಲಿ ಗೆದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿ : ಶೋಯಬ್ ಅಖ್ತರ್