ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ): ಇದೇ ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟ ಜನಪ್ರಿಯ ಮೋಟೋ ರೇಸ್ ಸಂಸ್ಥೆ ದೊಡ್ಡ ಎಡವಟ್ಟು ಮಾಡಿದೆ. ಭಾರತ್ ಜಿಪಿ ಎಂದು ಮರುನಾಮಕರಣ ಮಾಡಲಾದ ಇಂಡಿಯನ್ ಆಯಿಲ್ ಗ್ರ್ಯಾನ್ ಪ್ರಿ ಆಫ್ ಇಂಡಿಯಾ ಶುಕ್ರವಾರ ವಿವಾದಕ್ಕೆ ಗುರಿಯಾಗಿದೆ.
ಲೈವ್‌ಸ್ಟ್ರೀಮ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಲ್ಲದ್ದ ಭಾರತದ ನಕ್ಷೆಯನ್ನು ನೋಡಿ ಮೋಟೋಜಿಪಿಯ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಶಿರವೇ ಇಲ್ಲದ ಭಾರತದ ಭೂಪಟವನ್ನು ಪ್ರಕಟಿಸಿ ಮೋಟೋಜಿಪಿ ಆಯೋಜಕರು ಎಡವಟ್ಟು ಮಾಡುಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮೋಟೋಜಿಪಿ ತರಾತುರಿಯಲ್ಲಿ ತನ್ನ ತಪ್ಪನ್ನು ಸರಿಪಡಿಸಿದೆ. ಬಳಿಕ ಎಲ್ಲಾ ಭಾರತೀಯ ವೀಕ್ಷಕರಲ್ಲಿ ಕ್ಷಮೆ ಕೋರಿದೆ.
ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರದೇಶದ ಸುತ್ತ ಹಲವು ವಿವಾದಗಳಿವೆ. ಆದಾಗ್ಯೂ, ಮೋಟೋಜಿಪಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ನಕ್ಷೆಯನ್ನು ಬಳಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಭಾರತ್ ಜಿಪಿಗಾಗಿ ಬುದ್ಧ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ರೇಸಿಂಗ್ ನಡೆಸುವ ಸಂದರ್ಭದಲ್ಲಿ ಶಿರವೇ ಇಲ್ಲದ ಭೂಪಟ ಹಾಕಿ ತಪ್ಪೆಸಗಿದೆ. ಅಭಿಮಾನಿಗಳಿಂದ ಸಾಕಷ್ಟು ಕೋಲಾಹಲ ಸೃಷ್ಟಿಯಾದ ಬಳಿಕ ತ್ವರಿತವಾಗಿ ದೋಷವನ್ನು ಸರಿಪಡಿಸಲಾಗಿದೆ. ಬಳಿಕ ಭಾರತ್ ಜಿಪಿಯ ನಂತರದ ಪ್ರಸಾರದ ಸಮಯದಲ್ಲಿ ಭಾರತದ ಸರಿಯಾದ ನಕ್ಷೆಯನ್ನು ತೋರಿಸಲಾಗಿದೆ.
"ಮೋಟೊ ಜಿಪಿ ಪ್ರಸಾರದ ಭಾಗವಾಗಿ ಈ ಹಿಂದೆ ತೋರಿಸಲಾದ ನಕ್ಷೆ ತಪ್ಪಾಗಿದೆ. ನಾವು ಭಾರತದಲ್ಲಿನ ನಮ್ಮ ಅಭಿಮಾನಿಗಳಲ್ಲಿ ಕ್ಷಮೆಕೋರಲು ಬಯಸುತ್ತೇವೆ. ನಮ್ಮ ಆತಿಥೇಯ ದೇಶಕ್ಕೆ ಬೆಂಬಲ ಮತ್ತು ಮೆಚ್ಚುಗೆಯನ್ನು ಹೊರತುಪಡಿಸಿ ಬೇರೆ ಯಾವುದೇ ಹೇಳಿಕೆ ನೀಡುವುದು ನಮ್ಮ ಉದ್ದೇಶವಲ್ಲ. ನಿಮ್ಮೊಂದಿಗೆ ಇಂಡಿಯನ್ ಆಯಿಲ್ ಗ್ರ್ಯಾನ್ ಪ್ರಿ ಆಫ್ ಇಂಡಿಯಾವನ್ನು ಆನಂದಿಸಲು ನಾವು ಉತ್ಸುಕರಾಗಿದ್ದೇವೆ. ಬುದ್ಧ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ಪ್ರೀತಿಯನ್ನು ತೋರಿಸುತ್ತೇವೆ" ಎಂದು ಮೋಟೋಜಿಪಿ ಬರೆದುಕೊಂಡಿದೆ.
ಹಲವು ರೇಸಿಂಗ್ ಉತ್ಸಾಹಿಗಳು ಭಾರತ್ ಜಿಪಿ ಮತ್ತು ಫಾರ್ಮುಲಾ 1ರಲ್ಲಿ ಮೋಟೋಜಿಪಿ ಬಳಸಿದ ನಕ್ಷೆಗಳಲ್ಲಿ ಹೋಲಿಕೆ ಗಮನಿಸಿದ್ದಾರೆ. ತಮ್ಮ ಗ್ರಿಲ್ ದಿ ಗ್ರಿಡ್ ವಿಡಿಯೋ ಫಾರ್ಮುಲಾ 1 ಭಾರತದ ತಪ್ಪು ನಕ್ಷೆಯನ್ನು ಸಹ ಬಳಸಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೋಟೋಜಿಪಿ ರೇಸ್ ಆಗಿರುವ ಮೋಟೋಜಿಪಿ ಭಾರತ್ ಅಥವಾ ದಿ ಗ್ರ್ಯಾಂಡ್ ಪ್ರಿಕ್ಸ್ ಆಫ್ ಇಂಡಿಯಾ ಸೆ.22 ರಿಂದ ಸೆ. 24ರವರೆಗೆ ನಡೆಯಲಿದೆ.
ಡೋರ್ನಾ ಸ್ಪೋರ್ಟ್ಸ್ ಸಹಯೋಗದಲ್ಲಿ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಆಯೋಜಿಸಿದ್ದು, MotoGP, Moto2, ಮತ್ತು Moto3 ವಿಭಾಗಗಳಲ್ಲಿ ಭಾಗವಹಿಸುವ 41 ತಂಡಗಳು ಮತ್ತು 82 ರೈಡರ್‌ಗಳೊಂದಿಗೆ ರೋಮಾಂಚಕ ಪ್ರದರ್ಶನ ನಡೆಯಲಿದೆ. ಫ್ರಾನ್ಸೆಸ್ಕೊ ಬಾಗ್ನಾಯಾ, ಮಾರ್ಕ್ ಮಾರ್ಕ್ವೆಜ್, ಮಾರ್ಕೊ ಬೆಝೆಚಿ, ಬ್ರಾಡ್ ಬೈಂಡರ್, ಜ್ಯಾಕ್ ಮಿಲ್ಲರ್ ಮತ್ತು ಜಾರ್ಜ್ ಮಾರ್ಟಿನ್ ಅವರಂತಹ ಹೆಸರಾಂತ ರೇಸರ್‌ಗಳು ಇದರಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಗ್ರ್ಯಾಂಡ್ ಪ್ರಿಕ್ ಆಫ್ ಭಾರತ್.. ಒಂಬತ್ತು ವರ್ಷಗಳ ನಂತರ ಮೋಟೋಜಿಪಿ ರೇಸ್ಗೆ ದೇಶ ಸಜ್ಜು