ದೋಹಾ:ಫಿಫಾ ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೋಲು ಗಳಿಸದ ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊರನ್ನು ಪ್ರಿಕ್ವಾರ್ಟರ್ ಫೈನಲ್ ಪಂದ್ಯದಿಂದ ತಂಡ ಹೊರಗಿಟ್ಟಿತ್ತು. ಇದು ಒಳಗೊಳಗೇ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಈ ನಡೆಯಿಂದ ಬೇಸರಗೊಂಡಿರುವ ರೊನಾಲ್ಡೊ ತಂಡ ತೊರೆಯುವ ಬಗ್ಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಇಂದು ರಾತ್ರಿ 8.30ಕ್ಕೆ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಮೊರಾಕ್ಕೊ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ರೊನಾಲ್ಡೊ ಆಡುವರೇ ಇಲ್ಲವೇ? ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಒಂದು ವೇಳೆ ವಿಶ್ವಶ್ರೇಷ್ಠ ಫುಟ್ಬಾಲರ್ ಕಣಕ್ಕಿಳಿಯದಿದ್ದರೆ ನಮಗೇ ಲಾಭ ಎಂದು ಮೊರಾಕ್ಕೊ ಕೋಚ್ ವಾಲಿದ್ ರೆಗ್ರಾಗುಯಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಾಲಿದ್, ಪೋರ್ಚುಗಲ್ ಬಲಿಷ್ಠ ತಂಡ. ರೊನಾಲ್ಡೊ ಸಾಧನೆ ಇತಿಹಾಸದ ಪುಟಗಳಲ್ಲಿದೆ. ಅಂತಹ ದಿಗ್ಗಜ ಆಟಗಾರ ಇಂದಿನ ಪಂದ್ಯದಲ್ಲಿ ಆಡದಿದ್ದರೆ, ಅದು ನಮಗೆ ಖುಷಿಯ ವಿಚಾರ. ಎದುರಾಳಿ ಕೋಚ್ ಆಗಿ ನಾನು ಇದನ್ನು ಸಂಭ್ರಮಿಸುವೆ. ಆದರೂ ಇದು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರದು. ನಮ್ಮ ಆಟಗಾರರು ಅದ್ಭುತ ಲಯದಲ್ಲಿದ್ದಾರೆ. ಪಂದ್ಯ ಗೆದ್ದು ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸುವುದೇ ನಮ್ಮ ಮುಂದಿರುವ ಗುರಿ ಎಂದು ಹೇಳಿದ್ದಾರೆ.