ನವದೆಹಲಿ: ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ತಮ್ಮ 54ನೇ ವಯಸ್ಸಿನಲ್ಲಿ ಬಾಕ್ಸಿಂಗ್ ರಿಂಗ್‌ಗೆ ಮರಳುತ್ತಿದ್ದಾರೆ. ಸೆಪ್ಟೆಂಬರ್ 12 ರಂದು ನಡೆಯಲಿರುವ ಪಂದ್ಯದಲ್ಲಿ ರಾಯ್ ಜೋನ್ಸ್ ಜೂನಿಯರ್ ವಿರುದ್ಧ ಹೋರಾಡಲಿದ್ದಾರೆ.
ಕಳೆದ ತಿಂಗಳು 54ನೇ ವರ್ಷಕ್ಕೆ ಕಾಲಿಟ್ಟ ಟೈಸನ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪುನರಾಗಮನವನ್ನು ಘೋಷಿಸಿದ್ದಾರೆ. ಈ ಪಂದ್ಯವು ಲಾಸ್ ಏಂಜಲೀಸ್‌ನ ಡಿಗ್ನಿಟಿ ಹೆಲ್ತ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿದ್ದು, ಪೇ-ಪರ್-ವ್ಯೂ ಮತ್ತು ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಟ್ರಿಲ್ಲರ್‌ನಲ್ಲಿ ಪ್ರಸಾರವಾಗಲಿದೆ.
ಮೇ 12 ರಂದು, ಮಾಜಿ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಟೈಸನ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 'ಐ ಆಮ್ ಬ್ಯಾಕ್' ಎಂದು ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿ, ಬಾಕ್ಸಿಂಗ್ ರಿಂಗ್‌ಗೆ ಮರಳುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು.
ಇದಲ್ಲದೇ ಟೈಸನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ತರಬೇತಿ ವಿಡಿಯೋ ಅಪ್ಲೋಡ್ ಮಾಡಿ, "ನಾನು ಹಿಂತಿರುಗುತ್ತಿದ್ದೇನೆ" ಎಂದು ಕ್ಯಾಪ್ಶನ್ನೀಡಿದ್ದರು.
ಟೈಸನ್ ನಿವೃತ್ತಿಯಾಗುವ ಮೊದಲು 58 ವೃತ್ತಿಪರ ಪಂದ್ಯಗಳಲ್ಲಿ 50 ಪಂದ್ಯಗಳನ್ನು ಗೆದ್ದಿದ್ದರು. 2005 ರಲ್ಲಿ ಕೆವಿನ್ ಮೆಕ್‌ಬ್ರೈಡ್‌ಗೆ ಸೋತ ನಂತರ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು. ಟೈಸನ್ ಮತ್ತು ಜೋನ್ಸ್ ನಡುವಿನ ಪಂದ್ಯವನ್ನು ಕ್ಯಾಲಿಫೋರ್ನಿಯಾ ರಾಜ್ಯ ಅಥ್ಲೆಟಿಕ್ ಆಯೋಗ ದೃಢಪಡಿಸಿದೆ.
"ಟೈಸನ್ ಮತ್ತು ಮಿಸ್ಟರ್ ಜೋನ್ಸ್ ಜೂನಿಯರ್ 40 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರಾಗಿದ್ದರಿಂದ ಇಬ್ಬರನ್ನು, ಸಿಎಸ್ಎಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗೆಯೆ ಕೋವಿಡ್ ಟೆಸ್ಟ್ ಕೂಡಾ ನಡೆಸಲಾಗುವುದು ಎಂದು ಕ್ಯಾಲಿಫೋರ್ನಿಯಾ ರಾಜ್ಯ ಅಥ್ಲೆಟಿಕ್ ಆಯೋಗ ತಿಳಿಸಿದೆ.
"ನಾನು ಮತ್ತೆ ಬಾಕ್ಸಿಂಗ್ ರಿಂಗ್‌ಗೆ ಮರಳುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ, ಮೈಕ್ ಟೈಸನ್ ಸಲುವಾಗಿ, ನಾನು ಮತ್ತೆ ರಿಂಗ್‌ಗೆ ಮರಳಲು ಒಪ್ಪಿದ್ದೇನೆ. ನನಗೆ, ಇದು ನಾನು ನಿರಾಕರಿಸಲಾಗದ ಒಂದು ಅವಕಾಶ. ಅವರೊಂದಿಗೆ ಅಖಾಡಕ್ಕೆ ಇಳಿಯಲು ಬಯಸುವವರಲ್ಲಿ ಆತ ನನ್ನನ್ನು ಆರಿಸಿಕೊಂಡಿದ್ದಾರೆ. ಅವರು ಹಾಗೆ ಆಯ್ಕೆ ಮಾಡಿದಾಗಿನಿಂದ, ನಾನು ಇಲ್ಲ ಎಂದು ಹೇಗೆ ಹೇಳಲಿ?" ಎಂದು ಜೋನ್ಸ್ ಹೇಳಿಕೊಂಡಿದ್ದಾರೆ