ಕರ್ನಾಟಕ

karnataka

ETV Bharat / sports

ಮೆಸ್ಸಿ ದಾಖಲೆ! ಆಸ್ಟ್ರೇಲಿಯಾ ಮಣಿಸಿ ಕ್ವಾರ್ಟರ್​ಫೈನಲ್​ ತಲುಪಿದ ಅರ್ಜೆಂಟೀನಾ

ಲಿಯೋನೆಲ್​ ಮೆಸ್ಸಿ, ಅಲ್ವರೇಜ್​ ದಾಖಲಿಸಿದ ಗೋಲುಗಳಿಂದಾಗಿ ಆಸ್ಟ್ರೇಲಿಯಾವನ್ನು ಸೋಲಿಸಿದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್​ ತಲುಪಿತು.

argentina-beats-australia
ಮೆಸ್ಸಿ ದಾಖಲೆ ಗೋಲು

By

Published : Dec 4, 2022, 7:21 AM IST

ಅಲ್ ರಯಾನ್ (ಕತಾರ್):ವಿಶ್ವಶ್ರೇಷ್ಠ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್‌ನಲ್ಲಿ ಬಾರಿಸಿದ ದಾಖಲೆಯ ಗೋಲಿನಿಂದಾಗಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ಕ್ವಾರ್ಟರ್​ಫೈನಲ್​ಗೆ ಲಗ್ಗೆ ಇಟ್ಟಿತು. 1 ಸಾವಿರನೇ ಪಂದ್ಯವಾಡಿದ ಮೆಸ್ಸಿ ಈ ವಿಶ್ವಕಪ್​ನಲ್ಲಿ ಮೂರನೇ ಗೋಲು ಗಳಿಸಿದರು.

ಕತಾರ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಸೋಲು ಕಂಡು ಆಘಾತಕ್ಕೀಡಾಗಿದ್ದ ತಂಡವನ್ನು ಹುರಿದುಂಬಿಸಿ ಮುನ್ನುಗ್ಗುತ್ತಿರುವ ಮೆಸ್ಸಿ, ಪಂದ್ಯದ 34 ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸಿದರು. ಇದು ಮೈದಾನದಲ್ಲಿ ಗೆಲುವಿನ ಅಲೆ ಎಬ್ಬಿಸಿತು.

ಚುರುಕಾದ ಪಾದಚಲನೆಯಿಂದ ಮೈದಾನದ ತುಂಬೆಲ್ಲಾ ಓಡಾಡಿದ ಹಿರಿಯ ಫುಟ್ಬಾಲಿಗ ತಂಡದ ಗೆಲುವಿಗೆ ಕಾರಣರಾದರು. ಇದಾದ ಬಳಿಕ ಹಲವು ಗೋಲುಗಳ ಪ್ರಯತ್ನ ನಡೆಸಿದರೂ ಉಭಯ ತಂಡದ ಗೋಲಿಗಳು ಅವಕಾಶ ಮಾಡಿಕೊಡಲಿಲ್ಲ. ಮೊದಲಾರ್ಧದಲ್ಲಿ 1-0 ಮುನ್ನಡೆ ಪಡೆದ ಅರ್ಜೆಂಟೀನಾ ನಿಟ್ಟುಸಿರು ಬಿಟ್ಟಿತು.

ದ್ವಿತೀಯಾರ್ಧದಲ್ಲಿ ಆಸ್ಟ್ರೇಲಿಯಾಗೆ ಅರ್ಜೆಂಟೀನಾದ ಜೂಲಿಯನ್​ ಅಲ್ವರೇಜ್​ ಮತ್ತೊಂದು ಆಘಾತ ನೀಡಿದರು. ಆಸ್ಟ್ರೇಲಿಯಾದ ಗೋಲ್‌ಕೀಪರ್ ಮ್ಯಾಥ್ಯೂ ರಿಯಾನ್​ರನ್ನು ವಂಚಿಸಿ 57 ನೇ ನಿಮಿಷದಲ್ಲಿ ಚೆಂಡನ್ನು ಗೋಲ್‌ ಪೋಸ್ಟ್‌ ಸೇರಿಸಿದರು. ಇದು ತಂಡದ ಗೆಲುವನ್ನು ಇನ್ನಷ್ಟು ಖಾತ್ರಿಪಡಿಸಿತು.

2006 ರ ಬಳಿಕ ಮತ್ತೊಮ್ಮೆ ಕ್ವಾರ್ಟರ್​ಫೈನಲ್​ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯಾಗೆ ಅರ್ಜೆಂಟೀನಾ ಯಾವುದೇ ಹಂತದಲ್ಲೂ ಗೋಲು ದಾಖಲಿಸಲು ಅವಕಾಶ ಮಾಡಿಕೊಡಲಿಲ್ಲ. 77 ನೇ ನಿಮಿಷದಲ್ಲಿ ಅರ್ಜೆಂಟೀನಾ ಮಿಡ್‌ಫೀಲ್ಡರ್ ಎಂಜೊ ಫೆರ್ನಾಂಡಿಸ್ ನೀಡಿದ ತಪ್ಪಾದ ಪಾಸ್​ ಬಳಸಿಕೊಂಡ ಆಸೀಸ್​ನ ಕ್ರೇಗ್ ಗುಡ್ವಿನ್ ಚೆಂಡನ್ನು ಗೋಲು ಬಾರಿಸಿದರು. ಕೊನೆಗೆ 2-1 ಗೋಲುಗಳ ಅಂತರದಿಂದ ಸೋತ ಆಸ್ಟ್ರೇಲಿಯಾ ವಿಶ್ವಕಪ್​ನಿಂದ ಹೊರಬಿತ್ತು. ಮೊದಲ ಪಂದ್ಯದ ಸೋಲಿನ ಶಾಕ್​ ಬಳಿಕ ಅರ್ಜೆಂಟೀನಾ ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತು.

ಮರಡೋನಾ ದಾಖಲೆ ಮೀರಿದ ಮೆಸ್ಸಿ:ತಮ್ಮ 5 ನೇ ಮತ್ತು ಕೊನೆಯ ವಿಶ್ವಕಪ್ ಆಡುತ್ತಿರುವ ಲಿಯೋನೆಲ್​ ಮೆಸ್ಸಿ ಇದೇ ಮೊದಲ ಬಾರಿಗೆ ನಾಕೌಟ್ ಹಂತದಲ್ಲಿ ಗೋಲು ಗಳಿಸಿದ್ದಲ್ಲದೇ ವಿಶ್ವಕಪ್​ನಲ್ಲಿ 9 ನೇ ಗೋಲು ಬಾರಿಸಿದರು. ಈ ಮೂಲಕ ಲೆಜೆಂಡರಿ ಫುಟ್ಬಾಲಿಗ ಡಿಯಾಗೋ ಮರಡೋನಾರ 8 ಗೋಲುಗಳ ದಾಖಲೆಯನ್ನು ಮುರಿದರು. 1 ಸಾವಿರ ಪಂದ್ಯವಾಡಿದ ಮೆಸ್ಸಿ ವೃತ್ತಿಜೀವನದಲ್ಲಿ ಒಟ್ಟಾರೆ 789 ಗೋಲುಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ:ಬಾಂಗ್ಲಾಕ್ಕೆ ವಿಮಾನದಲ್ಲಿ ತೆರಳುತ್ತಿದ್ದ ಕ್ರಿಕೆಟಿಗ ಚಹಾರ್​ಗೆ ಕೆಟ್ಟ ಅನುಭವ

ABOUT THE AUTHOR

...view details