ತಾಷ್ಕೆಂಟ್ (ಉಜ್ಬೇಕಿಸ್ತಾನ್):ನಡೆಯುತ್ತಿರುವ ಐಬಿಎ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ದೀಪಕ್ ಭೋರಿಯಾ (51 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ತಮ್ಮ ಅಮೋಘ ಫಾರ್ಮ್ಗಳನ್ನು ಮುಂದುವರೆಸಿದ್ದಾರೆ. ಅವರು ಇಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಚೀನಾದ ಜಿಯಾಮಾವೊ ಜಾಂಗ್ ವಿರುದ್ಧ ಆಡಿದ ದೀಪಕ್ ಆರಂಭದಿಂದಲೇ ಪಂದ್ಯವನ್ನು ನಿಯಂತ್ರಿಸಿದರು ಮತ್ತು 5-0 ರಿಂದ ಗೆದ್ದರು.
ದೀಪಕ್ ಮೊದಲ ಸುತ್ತಿನ ವೇಳೆಗೆ ಎದುರಾಳಿಯ ಬಲಹೀನತೆಯ ಬಗ್ಗೆ ತಿಳಿದುಕೊಂಡಿದ್ದರಿಂದ ಸರಿಯಾದ ಚಲನೆ ಮತ್ತು ನಿಖರವಾದ ಪಂಚ್ಗಳನ್ನು ಮಾಡಿದರು. ಅವರು ಎರಡನೇ ಸುತ್ತಿನ ಪ್ರಾರಂಭದಲ್ಲಿ ರಕ್ಷಣಾತ್ಮಕ ಕ್ರಮಕ್ಕೆ ಹೋದರು ಮತ್ತು ಅವರ ಎದುರಾಳಿಯ ಮೇಲೆ ಕೆಲವು ಭಾರವಾದ ಎಡ ಹುಕ್ಗಳನ್ನು ತಮ್ಮ ಪ್ರತಿ ದಾಳಿಯಾಗಿ ಬಳಸಿದರು. ಮೂರನೇ ಸುತ್ತಿನಲ್ಲಿ, ಝಾಂಗ್ ಆಕ್ರಮಣಕಾರಿಯಾಗಿ ಹೊಡೆತಗಳಿಗೆ ಮುಂದಾದಾಗ ಪಾದಗಳ ಚಲನೆಯ ಮೂಲಕ ತಮ್ಮ ಎದುರಾಳಿಯನ್ನು ಸುಲಭವಾಗಿ ನಿಯಂತ್ರಿಸಿ ಗೆದ್ದುಕೊಂಡರು.
"ಪಂದ್ಯದಲ್ಲಿ ನನ್ನ ಬಲಶಾಲಿ ಅಸ್ತ್ರವನ್ನು ಬಳಸುವುದು ನನ್ನ ತಂತ್ರವಾಗಿತ್ತು, ಅದು ನನ್ನ ಎಡ ಹುಕ್ ಮತ್ತು ಪಂದ್ಯದಲ್ಲಿ ಎಲ್ಲವೂ ನಮ್ಮ ಯೋಜನೆಗೆ ಅನುಗುಣವಾಗಿ ನಡೆಯಿತು. ನಾನು ಪಂದ್ಯದ ಆರಂಭದಲ್ಲಿ ವೇಗವನ್ನು ಪಡೆಯಲು ಮತ್ತು ಕೆಲವು ನಿಖರವಾದ ಪಂಚ್ಗಳನ್ನು ಹೊಡೆಯುವ ಮೊದಲು ನನ್ನ ಎದುರಾಳಿಯನ್ನು ಸೆಳೆಯಲು ಪ್ರಯತ್ನಿಸಿದೆ. ನನ್ನ ಗಮನ ಇದೀಗ ಮುಂದಿನ ಪಂದ್ಯದಲ್ಲಿದೆ. ಭಾರತಕ್ಕಾಗಿ ಪದಕ ಗೆಲ್ಲಲು 100 ಪ್ರತಿಶತವನ್ನು ನೀಡುತ್ತೇನೆ", ಎಂದು ವಿಜಯದ ನಂತರ ದೀಪಕ್ ಹೇಳಿದರು.
ಅವರು ಈಗ ತಮ್ಮ ಮುಂದಿನ ಪಂದ್ಯವನ್ನು ಕಿರ್ಗಿಸ್ತಾನ್ನ ದಿಯುಶೆಬಾವ್ ನೂರ್ಜಿಗಿಟ್ ವಿರುದ್ಧ ಆಡಲಿದ್ದಾರೆ ಮತ್ತು ಭಾರತಕ್ಕೆ ಪದಕವನ್ನು ಖಚಿತಪಡಿಸಲು ನೋಡುತ್ತಾರೆ.