ಜಕಾರ್ತಾ:ಇಂಡೋನೇಷಿಯಾದಲ್ಲಿ ನಡೆದ 23ನೇ ಪ್ರೆಸಿಡೆಂಟ್ ಕಪ್ ಟೂರ್ನಿಯಲ್ಲಿ ಪರಾಕ್ರಮ ತೋರಿದ ಭಾರತೀಯ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ.
ಬಾಕ್ಸಿಂಗ್ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕೋಮ್, ಆಸ್ಟ್ರೇಲಿಯಾದ ಏಪ್ರಿಲ್ ಫ್ರಾಂಕ್ಸ್ ಅವರನ್ನ 5-0 ಅಂತರಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೇರಿ ಕೋಮ್ ನನಗೆ ಮತ್ತು ನನ್ನ ದೇಶಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಈ ಪ್ರಯತ್ನಕ್ಕೆ ನೆರವಾದ ಕೋಚ್ ಮತ್ತು ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಟ್ವೀಟ್ ಮಾಡಿದ್ದು ಕೋಮ್ ಅವರನ್ನ ಅಭಿನಂದಿಸಿದ್ದಾರೆ.
ಮೇ ತಿಂಗಳಲ್ಲಿ ನಡೆದ ಇಂಡಿಯನ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದ ಕೋಮ್, ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿರಲಿಲ್ಲ. ಸದ್ಯ 2020ರ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದು, ಭರ್ಜರಿ ತಯಾರಿ ನಡೆಸುತ್ತಿದ್ದಾರೆ.