ಸೈಕ್ಲಿಂಗ್ ಮುಗಿಸಿಕೊಂಡು ಬಂದ ಸ್ಪರ್ಧಿಯೊಬ್ಬ ತನ್ನ ಗೆಳತಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡುತ್ತಿರುವಾಗ ಸ್ನಾಯು ಸೆಳೆತಕ್ಕೀಡಾಗಿದ್ದಾನೆ. ನೋವು ಉಲ್ಬಣಿಸಿದರೂ ಬಿಡದ ಆತ ಬೇರೆಯವರ ಸಹಾಯ ಪಡೆದು ತನ್ನಾಕೆಯ ಮುಂದೆ ಪ್ರೀತಿ ನಿವೇದಿಸಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ "ನೋವಿನ ಪ್ರೀತಿಯ" ವಿಡಿಯೋವನ್ನು ಐರನ್‌ಮ್ಯಾನ್ ಯುರೋಪ್ ಎಂಬ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು, ತಪ್ಪಾದ ಸಮಯದಲ್ಲಿ ನೋವುಂಟಾದಾಗ ಎಂದು ಶೀರ್ಷಿಕೆ ನೀಡಲಾಗಿದೆ. ಇದಕ್ಕೆ ನೆಟಿಜನ್ಗಳಿಂದ ತರಹೇವಾರಿ ಕಮೆಂಟ್ಗಳು ಬಂದಿವೆ.
ಕ್ರಿಸ್ಟಿಯನ್ ಮೊರಿಯಾಟಿಯೆಲ್ ಎಂಬ ಸ್ಪರ್ಧಿ ಎಸ್ಟೋನಿಯಾದಲ್ಲಿ ನಡೆದ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿದ್ದ. 6 ನೇ ಸ್ಪರ್ಧಿಯಾಗಿ ಗುರಿ ತಲುಪಿದ ಬಳಿಕ ಆತ ನೇರವಾಗಿ ವೀಕ್ಷಕರ ಗ್ಯಾಲರಿಗೆ ಹೋಗಿ ಅಲ್ಲಿದ್ದ ತನ್ನ ಗೆಳತಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.
ಕಾಲು ನೆಲದ ಮೇಲೆ ಊರಿ ಪ್ರೀತಿ ಬಯಸಿದಾಗ ದಿಢೀರ್ ಆಗಿ ಕಾಲಿನ ಸ್ನಾಯು ಸೆಳೆದಿದೆ. ನೋವಿನಿಂದ ಆತ ಕುಸಿದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದವರು ನೆರವಿಗೆ ಬಂದಿದ್ದಾರೆ. ಅವರ ಸಹಾಯದಿಂದ ಸ್ಪರ್ಧಿ ಕಷ್ಟಪಟ್ಟು ಪ್ರೇಯಸಿಗೆ ತನ್ನ ಪ್ರೀತಿ ಬಗ್ಗೆ ತಿಳಿಸಿದ್ದಾನೆ. ಇದಕ್ಕೆ ಆಕೆ ಸಮ್ಮತಿಸಿಯೂ ನೀಡಿದ್ದಾಳೆ. ಮನದರಸಿಯ ಒಪ್ಪಿಗೆಯೂ ಆತನಲ್ಲುಂಟಾದ ನೋವನ್ನೂ ಮರೆಸಿರಬಹುದು.
ಇದನ್ನೂ ಓದಿ:ಬರಿಗೈಯಲ್ಲಿ ರಕ್ಷಿಸಲು ಬಂದವನಿಗೆ ಕಚ್ಚಿದ ನಾಗರಹಾವು: ಸ್ನೇಕ್ ಲೋಕೇಶ್ ಸಾವು