ಮ್ಯಾಡ್ರಿಡ್ (ಸ್ಪೇನ್): ಭಾರತದ ಶಟ್ಲರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾನುವಾರ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ ತಮ್ಮ ಅಂತಿಮ ಪಂದ್ಯದಲ್ಲಿ ಸೋಲನುಭವಿಸಿದರು. ಸಿಂಧು 8-21, 8-21 ರ ಎರಡು ನೇರ ಸೆಟ್‌ಗಳಲ್ಲಿ ಪಂದ್ಯವನ್ನು ಕಳೆದುಕೊಂಡರು.
ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವದ ನಂ. 11 ಮತ್ತು ಪಂದ್ಯಾವಳಿಯಲ್ಲಿ ಎರಡನೇ ಶ್ರೇಯಾಂಕದ ಸಿಂಧುಗೆ ಇದು ವರ್ಷದ ಮೊದಲ ಫೈನಲ್ ಪಂದ್ಯವಾಗಿತ್ತು. ಸಿಂಧು ಶನಿವಾರ ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ ಜಯಗಳಿಸುವ ಮೂಲಕ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿದ್ದರು. ಸಿಂಧು ಸೆಮಿಫೈನಲ್ ಕಠಿಣ 24-22, 22-20ರ ಹಣಾಹಣಿಯಲ್ಲಿ ಜಯ ಸಾಧಿಸಿದ್ದರು.
ನಿಧಾನ ಗತಿಯ ಆರಂಭ:ಸಿಂಧು ನಿಧಾನಗತಿಯ ಆರಂಭವನ್ನು ಮಾಡಿದರು. ಕೆಲ ತಪ್ಪುಗಳು ಇಂಡೋನೇಷ್ಯಾದ ಎದುರಾಳಿಗೆ ಲಾಭವಾಯಿತು. ಸಿಂಧು ತೋರಿದ ಎಡವಟ್ಟುಗಳ ಲಾಭ ಪಡೆದ ಇಂಡೋನೇಷ್ಯಾದ ಆಟಗಾರ್ತಿ ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದರು. ಎರಡನೇ ಗೇಮ್‌ನಲ್ಲಿ, ಸಿಂಧು ತಮ್ಮ ಎದುರಾಳಿಯನ್ನು ತಡೆಯಲು ಪ್ರಯತ್ನಿಸುವಷ್ಟರಲ್ಲಿ, ತುಂಜಂಗ್ ಎರಡನೇ ಗೇಮ್ ಅನ್ನು ಸುಲಭವಾಗಿ ಗೆದ್ದರು. ಕೇವಲ 28 ನಿಮಿಷಗಳಲ್ಲಿ ಪಂದ್ಯವನ್ನು ನೇರ ಸೆಟ್ನಿಂದ ಗೆದ್ದುಕೊಂಡರು. ಇದು ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರು ಪಿವಿ ಸಿಂಧು ವಿರುದ್ಧ ಎಂಟು ಮುಖಾಮುಖಿಯಲ್ಲಿನ ಮೊದಲ ಗೆಲುವಾಗಿದೆ.
ಇದನ್ನೂ ಓದಿ:ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್: ಕಾಮನ್ವೆಲ್ತ್ ಬಳಿಕ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು