ನವದೆಹಲಿ:ಕಾಮನ್ವೆಲ್ತ್ ಗೇಮ್ಸ್‌ಗಾಗಿ ನಡೆಸಲಾದ ಆಯ್ಕೆ ಟ್ರಯಲ್ಸ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ ಮತ್ತು ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರು ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಟ್ರಯಲ್ಸ್ನ ಫೈನಲ್ ಪಂದ್ಯದಲ್ಲಿ ಈ ಇಬ್ಬರು ಮೇರು ಆಟಗಾರ್ತಿಯರು ಎದುರಾಳಿಗಳನ್ನು ಮಣಿಸಿ ತಾವು ಕಾಮನ್ವೆಲ್ತ್ ಗೇಮ್ಸ್ಗೆ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ.
ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೂರು 3 ದಿನಗಳ ಟ್ರಯಲ್ಸ್‌ನಲ್ಲಿ ಸ್ಟಾರ್ ಬಾಕ್ಸರ್ ಲವ್ಲಿನಾ, ನಿಖತ್ ಜರೀನ್ ಸೇರಿದಂತೆ ನಿತು (48ಕೆಜಿ) ಮತ್ತು ಜೈಸ್ಮಿನ್ (60ಕೆಜಿ) ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಟ್ರಯಲ್ಸ್ನ ಫೈನಲ್ ಪಂದ್ಯದಲ್ಲಿ ಲವ್ಲಿನಾ 70 ಕೆಜಿ ವಿಭಾಗದಲ್ಲಿ ಪೂಜಾ ಅವರನ್ನು ಸೋಲಿಸಿದರೆ, ನಿಖತ್ 50 ಕೆಜಿ ವಿಭಾಗದಲ್ಲಿ ಮೀನಾಕ್ಷಿ ಅವರನ್ನು ಮಣಿಸಿದರು. ಇವರು ಕ್ರಮವಾಗಿ 7-0 ಅಂತರದಲ್ಲಿ ಎದುರಾಳಿ ವಿರುದ್ಧ ಜಯ ಗಳಿಸಿದರು.
ಮಂಜು ರಾಣಿ ವಿರುದ್ಧ ನಿತು ಪರಾಕ್ರಮ: ದಿನದ ರೋಚಕ ಪಂದ್ಯದಲ್ಲಿ ಬಾಕ್ಸರ್ ನಿತು, 2019 ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ಮಂಜು ರಾಣಿ ವಿರುದ್ಧ 5-2 ರಿಂದ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ನಿತು ಸೋತರೂ, ನಂತರದ ಸುತ್ತುಗಳಲ್ಲಿ ಕಠಿಣ ಸ್ಪರ್ಧಿ ಮಂಜು ರಾಣಿಯನ್ನು ಸದೆಬಡಿದು, ಆಯ್ಕೆಗೆ ಅರ್ಹತೆ ಪಡೆದರು.