ನವದೆಹಲಿ: ಬೀಜಿಂಗ್ನಲ್ಲಿ ನಡೆದ 2008ರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ನಾನು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೆ ಎಂದು ಭಾರತದ ಶ್ರೇಷ್ಠ ಒಲಿಂಪಿಯನ್ ಅಭಿನವ್ ಬಿಂದ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ವೈಯಕ್ತಿಕ ಚಿನ್ನ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಬಿಂದ್ರಾ ಅವರು ಪಾತ್ರರಾಗಿದ್ದಾರೆ.
ನೀವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೀರಾ? ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಿಂದ್ರಾ, ನಾನು ಕ್ರೀಡಾ ಕ್ಷೇತ್ರದಲ್ಲಿ ಸುದೀರ್ಘ ಜೀವನ ಕಳೆದಿದ್ದೇನೆ. ಈ ನಡುವೆ ಆನೇಕ ಏರಿಳಿತಗಳನ್ನೂ ಅನುಭವಿಸಿದ್ದೇನೆ. ಜೀವನದ ಅತಿದೊಡ್ಡ ಸಂಭ್ರಮ ನನ್ನ ಪಾಲಿಗೆ ಒದಗಿ ಬಂದ ಬಳಿಕ ಮಾನಸಿಕವಾಗಿ ಕುಗ್ಗಿ ಹೋದೆ. ಈ ವೇಳೆ ನನ್ನನ್ನು ಹಲವರು ಟೀಕಿಸಿದರು. ಗೆದ್ದಾಗ ಮಾನಸಿಕವಾಗಿ ಕುಗ್ಗುವ ಈತ ವೈಫಲ್ಯಗಳನ್ನು ಹೇಗೆ ಎದುರಿಸಬಹುದು? ಎಂದು ಮಾತನಾಡಿದರು. ಬಹುಶಃ ಯಶಸ್ಸನ್ನು ನಿರ್ವಹಿಸುವುದು ನನ್ನ ಜೀವನದಲ್ಲಿ ಅತ್ಯಂತ ಕಠಿಣ ಸಮಯ ಎಂದೆನಿಸುತ್ತದೆ ಎಂದು ಮನದಾಳ ಬಿಚ್ಚಿಟ್ಟರು.