ಪೆರು: ಅರ್ಜೆಂಟೀನಾ ತಂಡವು ಎರಡು ಗೋಲುಗಳ ನೆರವಿನಿಂದ 2026ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪೆರು ವಿರುದ್ಧ ವಿಜಯ ಸಾಧಿಸಿತು. ಲಿಮಾದ ಎಸ್ಟಾಡಿಯೊ ನ್ಯಾಶನಲ್ ಡಿ ಲಿಮಾದಲ್ಲಿ ಮಂಗಳವಾರ ಪಂದ್ಯ ನಡೆಯಿತು. ಅರ್ಜೆಟೀನಾ 2-0 ಗೋಲುಗಳ ಅಂತರದ ಜಯ ಸಾಧಿಸಿತು. ಸ್ಟಾರ್ ಫುಟ್‌ಬಾಲಿಗ ಲಿಯೋನೆಲ್ ಮೆಸ್ಸಿ ಅವರ ಆಕ್ರಮಣಕಾರಿ ಆಟದ ಫಲವಾಗಿ ತಂಡ ಗೆಲುವಿನ ನಗೆ ಬೀರಿತು.
ಬಲಗಾಲಿನ ಸ್ನಾಯು ಸೆಳೆತದ ಹೊರತಾಗಿಯೂ ಕ್ರೀಡಾಂಗಣಕ್ಕೆ ಇಳಿದಿದ್ದ 36 ವರ್ಷದ ಮೆಸ್ಸಿ, ಎರಡು ಗೋಲು ಗಳಿಸುವ ಮೂಲಕ ಮತ್ತೆ ಹೀರೋ ಆದರು. ತಮ್ಮ ಎಂದಿನ ಆಟದಂತೆ ಆರಂಭದಿಂದ ಕೊನೆಯವರೆಗೂ ಮೈದಾನದಲ್ಲೆಲ್ಲ ಓಡಾಡಿ ಫುಟ್‌ಬಾಲ್ ಅಭಿಮಾನಿಗಳನ್ನು ರಂಜಿಸಿದರು. ಸ್ನಾಯು ಸೆಳೆತದಿಂದ ಮೈದಾನದಿಂದ ದೂರವಿದ್ದ ಮೆಸ್ಸಿ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದರು. ಇದೀಗ ಪೆರು ವಿರುದ್ಧದ ಅವರ ಆಟ ಅಭಿಮಾನಿಗಳನ್ನು ಮತ್ತೆ ಮೋಡಿ ಮಾಡಿತು.
ಮೈದಾನದಲ್ಲಿ ಪಾದರಸದಂತೆ ಚುರುಕಾಗಿ ಓಡಾಡಿದ ಮೆಸ್ಸಿ, ಮಿಡ್‌ಫೀಲ್ಡ್ ದಾಟುವ ಮುನ್ನ ಗೋಲ್ ಲೈನ್‌ನಲ್ಲಿ ಡ್ರಿಬ್ಲಿಂಗ್ ಮಾಡುವಾಗ ಪೆರುವಿನ ಡಿಫೆಂಡರ್ ಎರಡು ಬಾರಿ ಕೆಳಗೆ ಬೀಳುವಂತೆ ಮಾಡಿದರು. ಮೆಸ್ಸಿ ಅದ್ಭುತ ಆಟದ ವೈಖರಿಯನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಪೆರುವಿನ ಡಿಫೆಂಡರ್ ಎರಡು ಗೋಲ್ಗಳನ್ನು ಬಿಟ್ಟುಕೊಟ್ಟರು. ಅರ್ಜೆಂಟೀನಾ ಗೆಲುವಿಗೆ ಕಾರಣವಾದ ಈ ಎರಡು ಗೋಲುಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.