ಬೀಜಿಂಗ್(ಚೀನಾ):ಫುಟ್‌ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರನ್ನು ಚೀನಾ ಪೊಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ನಡೆದಿದೆ. ಸೌಹಾರ್ದ ಪಂದ್ಯಕ್ಕಾಗಿ ಬೀಜಿಂಗ್ಗೆ ಆಗಮಿಸಿದ್ದ ಮೆಸ್ಸಿಯನ್ನು ವೀಸಾ ಸಮಸ್ಯೆಯಿಂದಾಗಿ ಗಡಿ ಭದ್ರತಾ ಪಡೆ ಯೋಧರು ಕೆಲ ಕಾಲ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಇದಾದ ಬಳಿಕ ವೀಸಾ ಕ್ಲಿಯರೆನ್ಸ್ ಸಿಕ್ಕ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ಮೆಸ್ಸಿ ತನ್ನ ತಂಡದೊಂದಿಗೆ ಸೌಹಾರ್ದ ಆಟಕ್ಕಾಗಿ ಚೀನಾಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ಪಾಸ್‌ಪೋರ್ಟ್ ಸಮಸ್ಯೆಯಿಂದಾಗಿ ವಿಮಾನದಲ್ಲಿನ ಭದ್ರತಾ ಸಿಬ್ಬಂದಿ ಮೆಸ್ಸಿಯನ್ನು ತಡೆದು ನಿಲ್ಲಿಸಿದ್ದಾರೆ. ಇದು ಆಟಗಾರರನಿಗೆ ಮುಜುಗರ ಉಂಟು ಮಾಡಿತು. ಆಟಗಾರ ಚೀನಾ ಭೇಟಿಗೂ ಮೊದಲು ವೀಸಾಕ್ಕೆ ಅರ್ಜಿ ಸಲ್ಲಿಸಿರಲಿಲ್ಲ, ಅಲ್ಲದೇ, ತನ್ನ ಅರ್ಜೆಂಟೀನಾದ ಬದಲಿಗೆ ಸ್ಪ್ಯಾನಿಷ್ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುತ್ತಿದ್ದರು. ಅದು ಚೀನಾ ಪ್ರವೇಶದ ಅವಕಾಶ ಹೊಂದಿಲ್ಲ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರಿಸುಮಾರು 30 ನಿಮಿಷಗಳ ನಂತರ ವಿಚಾರಣೆ ಮತ್ತು ವೀಸಾ ಸಮಸ್ಯೆ ಕುರಿತು ಚರ್ಚಿಸಿದ ಬಳಿಕ ಅವರನ್ನು ಪೊಲೀಸರು ಅಲ್ಲಿಂದ ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವಿಡಿಯೋ ಕ್ಲಿಪ್ನಲ್ಲಿ ವಿಶ್ವಕಪ್ ವಿಜೇತ ನಾಯಕನನ್ನು ಹಲವಾರು ಪೊಲೀಸ್ ಅಧಿಕಾರಿಗಳು ಸುತ್ತುವರೆದಿದ್ದಾರೆ. ಕೈಯಲ್ಲಿ ಪಾಸ್‌ಪೋರ್ಟ್ ಹಿಡಿದಿರುವ ಮೆಸ್ಸಿ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇವರ ಜೊತೆಗೆ ಕೆಲ ಸಹ ಆಟಗಾರರೂ ಇದ್ದಾರೆ.
ಆಸೀಸ್ ಜೊತೆ ಸೌಹಾರ್ದ ಪಂದ್ಯ:ಮಿಯಾಮಿಯಲ್ಲಿ ನಡೆಯಲಿರುವ ಮೇಜರ್ ಲೀಗ್ ಸಾಕರ್ (ಎಂಎಲ್ಎಸ್) ಪಂದ್ಯಾವಳಿಗೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಇದೇ ಜೂನ್ 15 ರಂದು ಬೀಜಿಂಗ್ನ ವರ್ಕರ್ಸ್ ಸ್ಟೇಡಿಯಂನಲ್ಲಿ ಸೌಹಾರ್ದ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಭಾಗವಹಿಸಲು ಮೆಸ್ಸಿ ಚೀನಾಕ್ಕೆ ಬಂದಿಳಿದಿದ್ದಾರೆ. ಇದು ಅವರ ಏಳನೇ ಭೇಟಿಯಾಗಿದೆ. 2017 ರ ನಂತರ ಇದು ಮೊದಲ ಆಗಮನವಾಗಿದೆ.
ಮೇಜರ್ ಲೀಗ್ ಸಾಕರ್ (MLS) ಕ್ಲಬ್ ಇಂಟರ್ ಮಿಯಾಮಿಗೆ ಲಿಯೋನೆಲ್ ಮೆಸ್ಸಿಯ ಆಗಮನ ನಿರೀಕ್ಷೆ ಹುಟ್ಟಿಸಿದೆ. ಪ್ಯಾರಿಸ್ ಸೇಂಟ್-ಜರ್ಮೈನ್ ಜೊತೆಗಿನ ಒಪ್ಪಂದವು ಕಳೆದ ತಿಂಗಳು ಕೊನೆಗೊಂಡ ನಂತರ ಎಂಎಲ್ಎಸ್ ಕ್ಲಬ್ ಪರ ಮೆಸ್ಸಿ ಕಣಕ್ಕಿಳಿಯಲಿದ್ದಾರೆ. ತನ್ನ ಬಾಲ್ಯದ ಕ್ಲಬ್ ಆದ ಎಫ್ಸಿ ಬಾರ್ಸಿಲೋನಾಗೆ ಮತ್ತೊಮ್ಮೆ ಮರಳಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಮೆಸ್ಸಿ ಅಮೆರಿಕ ಮೂಲಕ ಮಿಯಾಮಿ ಫುಟ್ಬಾಲ್ ಕ್ಲಬ್ ಜೊತೆಗೆ ವೃತ್ತಿಜೀವನ ಮುಂದುವರಿಸಲು ಬಯಸಿದ್ದು, ಡೇವಿಡ್ ಬೆಕ್‌ಹ್ಯಾಮ್ ಅವರ ಮಿಯಾಮಿ ಮೂಲದ ಫ್ರಾಂಚೈಸ್‌ಗೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ನಾನು ಮಿಯಾಮಿ ಕ್ಲಬ್ ಸೇರಲು ಮುಂದಾಗಿದ್ದೇನೆ. ಇದು 100% ಖಚಿತ. ಅಲ್ಲಿಗೆ ಹೋಗಲು ನಿರ್ಧರಿಸಲಾಗಿದೆ. ಬಾರ್ಸಿಲೋನಾ ತಂಡದ ಜೊತೆಗೆ ಒಪ್ಪಂದ ಮುಂದುವರಿಸಿಲ್ಲ. ನನ್ನ ಕುಟುಂಬದ ಬಗ್ಗೆ ಹೆಚ್ಚು ಯೋಚಿಸಲು ಬಯಸುತ್ತೇನೆ. ವಿಶ್ವಕಪ್ ಗೆದ್ದ ನಂತರ ಅಮೆರಿಕದ ಕ್ಲಬ್ ಸೇರಲು ಬಯಸಿದೆ. ಫುಟ್‌ಬಾಲ್ ಅನ್ನು ವಿಭಿನ್ನ ರೀತಿಯಲ್ಲಿ ಅನುಭವಿಸಲು ಮತ್ತು ದಿನದಿಂದ ದಿನಕ್ಕೆ ಆನಂದಿಸಲು ಈ ಲೀಗ್ನಲ್ಲಿ ಪಾಲ್ಗೊಳ್ಳುತ್ತಿರುವೆ. ಜವಾಬ್ದಾರಿಯೊಂದಿಗೆ ಆಟ ಆಡುವೆ ಎಂದರು ಲಿಯೋನೆಲ್ ಮೆಸ್ಸಿ ಹೇಳಿದರು.
ಇದನ್ನೂ ಓದಿ:ATP Ranking: 23ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ಮತ್ತೆ ಅಗ್ರ ಪಟ್ಟ ಅಲಂಕರಿಸಿದ ನೊವಾಕ್ ಜೊಕೊವಿಚ್