ಟೋಕಿಯೋ :ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯಸೇನ್, ಕೊರಿಯಾ ಓಪನ್ ವಿಜೇತ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ನ 2ನೇ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ಫೈನಲ್ ತಲುಪಿದರು. ಇನ್ನೊಂದೆಡೆ ಟ್ರೀಸಾ ಜಾಲಿ ಮತ್ತು ಪುಲ್ಲೇಲಾ ಗಾಯತ್ರಿ ಗೋಪಿಚಂದ್ ಜೋಡಿ ಮಹಿಳಾ ಡಬಲ್ಸ್ನಲ್ಲಿ ಸೋಲನುಭವಿಸಿದರು.
ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 750 ಸ್ಪರ್ಧೆಯಲ್ಲಿ ಗುರುವಾರ ನಡೆದ ಸಿಂಗಲ್ಸ್ನ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ಸಿಂಗಲ್ಸ್ ತಾರೆ ಲಕ್ಷ್ಯಸೇನ್ ಜಪಾನ್‌ನ ಕಾಂತಾ ತ್ಸುನೇಯಾಮಾ ವಿರುದ್ಧ 50 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-14, 21-16 ನೇರ ಸೆಟ್ಗಳಿಂದ ಸೋಲಿಸಿದರು.
ಯೋಗಿ ನ್ಯಾಷನಲ್ ಜಿಮ್ನಾಷಿಯಂನ ಕೋರ್ಟ್ 1 ರಲ್ಲಿ ನಡೆದ ಪಂದ್ಯದಲ್ಲಿ ಲಕ್ಷ್ಯ ಸೇನ್ ಮೊದಲ ಗೇಮ್‌ನಲ್ಲಿ ಆರಂಭದಲ್ಲೇ 5-1 ರಲ್ಲಿ ಮುನ್ನಡೆ ಪಡೆದರು. ಬಳಿಕ ತುಸು ಎಚ್ಚರಿಕೆಯ ಆಟವಾಡಿದ ಜಪಾನ್ ಆಟಗಾರ ಅಂತರವನ್ನು 7-5ಕ್ಕೆ ತಗ್ಗಿಸಿಕೊಂಡರು. ಆದರೆ, ಸೇನ್ ಮುಂದಿನ 5 ಅಂಕಗಳನ್ನು ಸತತವಾಗಿ ಗೆದ್ದು 12- 5ಕ್ಕೆ ಅಂತರ ಹೆಚ್ಚಿಸಿಕೊಂಡರು. ಜಿದ್ದಾಜಿದ್ದಿನ ಸೆಣಸಾಟದಲ್ಲಿ ತ್ಸುನೇಯಾಮಾ 16-14ಕ್ಕೆ ಬಂದು ನಿಂತರು. ನಂತರ ಭಾರತದ ಷಟ್ಲರ್ ಸತತ 5 ಅಂಕಗಳನ್ನು ಗೆಲ್ಲುವ ಮೂಲಕ ಗೇಮ್ ವಶಪಡಿಸಿಕೊಂಡರು.
ಎರಡನೇ ಸೆಟ್ನಲ್ಲೂ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಆರಂಭದಲ್ಲಿ ಇಬ್ಬರೂ 6-6 ಸಮಬಲ ಪಡೆದರು. ಈ ವೇಳೆ ಸೇನ್ ಚಾಣಾಕ್ಷತನ ಮೆರೆದು 10-7ರಲ್ಲಿ ಮುನ್ನಡೆದರು. ಸುನೇಯಾಮಾ ಚೇತರಿಸಿಕೊಂಡು 12-11ಕ್ಕೆ ಅಂತರ ತಗ್ಗಿಸಿದರು. ನಂತರ 16-16 ರಲ್ಲಿ ಪಂದ್ಯ ಸಾಗಿತು. ಈ ಹಂತದಲ್ಲಿ ಭಾರತದ ತಾರಾ ಶಟ್ಲರ್ ಬಲವಾದ ಮತ್ತು ಬುದ್ಧಿವಂತಿಕೆಯಿಂದ ಸತತ 5 ಪಾಯಿಂಟ್ಗಳನ್ನು ಪಡೆಯುವ ಮೂಲಕ 2ನೇ ಸೆಟ್ ಅನ್ನು ಗೆದ್ದರು. ಇಬ್ಬರ ಮಧ್ಯೆ 50 ನಿಮಿಷ ಆಟ ನಡೆಯಿತು.