ಜಕಾರ್ತ (ಇಂಡೋನೇಷ್ಯಾ): ಭಾರತದ ಶಟ್ಲರ್ ಕಿರಣ್ ಜಾರ್ಜ್ ಅವರು ಭಾನುವಾರ ಇಂಡೋನೇಷ್ಯಾ ಮಾಸ್ಟರ್ಸ್ 2023 ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಜಪಾನ್‌ನ ವಿಶ್ವದ ನಂ 82 ನೇ ಶ್ರೇಯಾಂಕದ ಕೂ ತಕಾಹಶಿ ಅವರನ್ನು 21-19, 22-20 ರಿಂದ ಸೋಲಿಸಿದ ಕಿರಣ್ ಜಾರ್ಜ್ ತಮ್ಮ ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಪಡೆದರು. ಜಾರ್ಜ್ ಕಳೆದ ವರ್ಷ ಒಡಿಶಾ ಓಪನ್ ಫೈನಲ್‌ನಲ್ಲಿ ಭಾರತದ ಇನ್ನೊಬ್ಬ ಆಟಗಾರ ಪ್ರಿಯಾಂಶು ರಾವತ್ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದಿದ್ದರು.
ಇಂಡೋನೇಷ್ಯಾ ಮಾಸ್ಟರ್ಸ್ ಫೈನಲ್‌ನಲ್ಲಿ, ಜಾರ್ಜ್ ಮತ್ತು ತಕಹಶಿ ನಡುವೆ ಮೊದಲ ಗೇಮ್‌ನಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿತ್ತು. 15ನೇ ಸ್ಕೋರ್‌ನಲ್ಲಿ ಇಬ್ಬರು ಆಟಗಾರರು ಸಮಬಲ ಸಾಧಿಸಿದ್ದರು. ನಂತರದ ಒಟ್ಟಾರೆ 10 ಅಂಕದಲ್ಲಿ 6ನ್ನು ಭಾರತೀಯ ಆಟಗಾರ ಪಡೆದರು. ಜಾರ್ಜ್ 15 ಪಾಯಿಂಟ್ ನಂತರ ಕೆಲ ಚತುರ ನಡೆಗಳನ್ನು ತೋರಿದರು. ಇದರಿಂದ 21 - 19 ರಿಂದ ಮೊದಲ ಸೆಟ್ ವಶಪಡಿಸಿಕೊಂಡರು.
ಎರಡನೇ ಪಂದ್ಯವೂ ಇನ್ನಷ್ಟೂ ತುರುಸಿನ ಪೈಪೋಟಿಗೆ ಕಾರಣವಾಯಿತು. ಇಬ್ಬರು ಆಟಗಾರರು ಒಂದೊಂದು ಅಂಕವನ್ನು ಅಂತರ ಕಾಯ್ದುಕೊಳ್ಳದಂತೆ ಕಲೆಹಾಕಿದರು. 23 ವರ್ಷದ ಕಿರಣ್ 16 - 11ರ ಮುನ್ನಡೆ ಸಾಧಿಸಿದರು. ಆದರೆ ಈ ಸೆಟ್ನ್ನು ಜಪಾನ್‌ನ ಆಟಗಾರ ಟೈ ಬ್ರೇಕರ್ಗೆ ತೆಗೆದುಕೊಂಡು ಹೋದರು. ಈ ವೇಳೆ ನಿರ್ಣಾಯಕ ಅಂಕಗಳನ್ನು ಗಳಿಸಿದ, ಕಿರಣ್ ಎರಡು ನೇರ ಸೆಟ್ನ ಗೆಲುವಿನಿಂದ 2023 ರ ಬ್ಯಾಡ್ಮಿಂಟನ್ ಋತುವಿನ ತನ್ನ ಮೊದಲ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 100 ಪ್ರಶಸ್ತಿಯನ್ನು ಗೆದ್ದರು.