ಡ್ಯುನೆಡಿನ್ (ನ್ಯೂಜಿಲೆಂಡ್):ಇಲ್ಲಿ ನಡೆದ ನ್ಯೂಜಿಲೆಂಡ್- ಶ್ರೀಲಂಕಾ ನಡುವಿನ ಪುರುಷರ ಎರಡನೇ ಟಿ20 ಪಂದ್ಯಕ್ಕೆ ಕಿಮ್ ಕಾಟನ್ ಎಂಬ ಮಹಿಳೆ ಅಂಪೈರಿಂಗ್ ಮಾಡಿದರು. ಈ ಮೂಲಕ ಅವರು ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ಗೆ ಅಂಪೈರ್ ಕಾರ್ಯ ನಿರ್ವಹಿಸಿದ ಮೊದಲ ಮಹಿಳೆ ಎಂಬ ಕೀರ್ತಿ ಇವರಿಗೆ ಸಲ್ಲುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಐತಿಹಾಸಿಕ ಕ್ಷಣವನ್ನು ತನ್ನ ಟ್ವಿಟರ್ ಪೇಜ್ನಲ್ಲಿ ಹಂಚಿಕೊಂಡಿದೆ. "ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ 2ನೇ ಅಂತಾರಾಷ್ಟ್ರೀಯ ಟಿ20 ಸಮಯದಲ್ಲಿ ಕಿಮ್ ಕಾಟನ್ ಎರಡು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ಪುರುಷರ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿ ಇತಿಹಾಸ ಸೃಷ್ಟಿಸಿದರು" ಎಂದು ತಿಳಿಸಿದೆ.
ಪಂದ್ಯ:ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ವೇಗದ ಬೌಲರ್ ಆಡಮ್ ಮಿಲ್ನೆ ಬಿರುಗಾಳಿ ಎಬ್ಬಿಸಿದರು. ಮಿಲ್ನೆ ಶ್ರೀಲಂಕಾ ತಂಡದ ಪ್ರಮುಖ ಐದು ವಿಕೆಟ್ ಉರುಳಿಸಿದ್ದಲ್ಲದೇ, ವೇಗದ ಎಸೆತಕ್ಕೆ ಪಾಥುಮ್ ನಿಸ್ಸಾಂಕಾ ಅವರ ಬ್ಯಾಟ್ ಮುರಿದು ಬಿತ್ತು. ಕಿವೀಸ್ ಬೌಲಿಂಗ್ ದಾಳಿಗೆ ನಲುಗಿದ ಸಿಂಹಳೀಯರು 19 ಓವರ್ಗೆ ಆಲ್ಔಟ್ ಆಗಿ 141 ರನ್‌ಗಳ ಸಾಧಾರಣ ಗುರಿ ನೀಡಿದರು.
ಮೊದಲ ಓವರ್ನಲ್ಲೇ ಬ್ಯಾಟ್ ಮುರಿದ ಮಿಲ್ನೆ:ಮೊದಲ ಓವರ್ನ ಐದನೇ ಎಸೆತಕ್ಕೆ ಪಾಥುಮ್ ನಿಸ್ಸಾಂಕಾ ಡಿಫೆನ್ಸ್ ಮಾಡಿದರು. ಬಾಲ್ ಹಿಡಿಕೆಯ ಕೆಳಭಾಗಕ್ಕೆ ತಗುಲಿತ್ತು. ವೇಗಕ್ಕೆ ಬ್ಯಾಟ್ ಎರಡು ತಂಡಾಯಿತು. 3.4 ನೇ ಎಸೆತದಲ್ಲಿ ನಿಸ್ಸಾಂಕಾ ಮಿಲ್ನೆಗೆ ವಿಕೆಟ್ ಕೊಟ್ಟು ಪೆವಿಲಿಯನ್ಗೆ ಮರಳಿದರು. ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಅವರನ್ನು 10 ರನೌಟ್ ಆದರೆ, ನಂತರದ ಬ್ಯಾಟರ್ಗಳಾದ ಕುಸಾಲ್ ಪೆರೆರಾ (35), ಚರಿತ್ ಅಸಲಂಕಾ (24), ಪ್ರಮೋದ್ ಮದುಶನ್ (1) ಮತ್ತು ದಿಶಾನ್ ಮಧುಶಂಕ (0) ಅವರನ್ನು ಆಡಮ್ ಮಿಲ್ನೆ ಹೊರಹಾಕಿದರು. ಮಿಲ್ನೆ 4 ಓವರ್‌ಗಳಲ್ಲಿ 26 ರನ್ ಕೊಟ್ಟು 5 ವಿಕೆಟ್ ಪಡೆದರು. ಬೆನ್ ಲಿಸ್ಟರ್ ಎರಡು ಮತ್ತು ಹೆನ್ರಿ ಶಿಪ್ಲಿ, ರಚಿನ್ ರವೀಂದ್ರ ಮತ್ತು ಜೇಮ್ಸ್ ನೀಶಮ್ ತಲಾ 1 ವಿಕೆಟ್ ಪಡೆದರು.
142 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ 14.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಸಾಧಿಸಿತು. ಚಾಡ್ ಬೋವ್ಸ್ 31 ರನ್‌ಗಳ ಇನಿಂಗ್ಸ್ ಆಡಿದರು. ಟಿಮ್ ಸೀಫರ್ಟ್ ಅಜೇಯ 79 ರನ್ ಮತ್ತು ಟಾಮ್ ಲ್ಯಾಥಮ್ 20 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಮಿಲ್ನೆ ಅವರಿಗಿದು ಮೊದಲ ಪಂಚ ವಿಕೆಟ್ ಸಾಧನೆಯಾಗಿದೆ. ಇದುವರೆಗೆ ಅವರು 37 ಟಿ20 ಪಂದ್ಯಗಳಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮೊದಲ ಟಿ20 ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿ, ಲಂಕಾ ಸೂಪರ್ ಓವರ್ನಲ್ಲಿ ಗೆಲುವು ಕಂಡಿತ್ತು. ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದಿದ್ದು ಸರಣಿ ಸಮಬಲವಾಗಿದೆ. ಮೂರನೇ ಟಿ20 ಪಂದ್ಯ ಏಪ್ರಿಲ್ 8 ರಂದು ನಡೆಯಲಿದ್ದು, ಇದು ಫೈನಲ್ ಪಂದ್ಯವಾಗಿದೆ.
ಇದನ್ನೂ ಓದಿ:IPL 2023 RR vs PBKS: ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ