ರಿಯಾದ್ (ಸೌದಿ ಅರೇಬಿಯಾ):ಕರ್ನಾಟಕ ಫುಟ್ಬಾಲ್ ತಂಡವು 54 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂತೋಷ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೇಘಾಲಯ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು 3-2 ಗೋಲುಗಳ ಅಂತರದ ಗೆದ್ದ ತಂಡದ ಆಟಗಾರರು ಪ್ರತಿಷ್ಟಿತ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು. 76ನೇ ಆವೃತ್ತಿಯ ಟೂರ್ನಿಯುದ್ಧಕ್ಕೂ ಆಕರ್ಷಕ ಪ್ರದರ್ಶನ ನೀಡಿದ ರಾಜ್ಯ ತಂಡ ಕೊನೆಗೂ ಐದು ದಶಕಗಳ ಪ್ರಶಸ್ತಿ ಬರ ನೀಗಿಸಿದೆ.
ಫೈನಲ್ ಪಂದ್ಯಾರಂಭವಾದ ಮೊದಲ ಎರಡು ನಿಮಿಷದಲ್ಲೇ ಕರ್ನಾಟಕ ಗೋಲು ಬಾರಿಸಿ ಖಾತೆ ತೆರೆಯಿತು. ಸೆಮಿಫೈನಲ್‌ನಲ್ಲಿ ಗೋಲು ಹೊಡೆದು ಗೆಲುವು ತಂದುಕೊಟ್ಟಿದ್ದ ಎಂ.ಸುನಿಲ್ ಕುಮಾರ್ ಮೊದಲ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ತನ್ನ ಆಕ್ರಮಣಕಾರಿ ಆಟದಿಂದಲೇ ಫೈನಲ್ಗೇರಿದ್ದ ಮೇಘಾಲಯ ಸಮಬಲ ಸಾಧಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಕರ್ನಾಟಕದ ಆಟಗಾರ ಫೌಲ್ ಮಾಡಿದ ಕಾರಣ ಆ ತಂಡಕ್ಕೆ 8ನೇ ನಿಮಿಷದಲ್ಲಿ ಸುಲಭವಾಗಿ ಗೋಲು ಹೊಡೆಯುವ ಪೆನಾಲ್ಟಿ ಅವಕಾಶ ದೊರೆಯಿತು. 9ನೇ ನಿಮಿಷದಲ್ಲಿ ಬ್ರೊಲಿಂಗ್ಡನ್ ಗೋಲು ಬಾರಿಸಿ ಸಮಬಲ ಸಾಧಿಸಿ ಮೇಘಾಲಯ ತಂಡಕ್ಕೆ ಆಸರೆಯಾದರು.
ನಂತರದಲ್ಲಿ ಚೆಂಡಿನ ಮೇಲೆ ಹಿಡಿತ ಬಿಟ್ಟುಕೊಡದ ಕರ್ನಾಟಕ 19ನೇ ನಿಮಿಷದಲ್ಲಿ ಬೀಕೆ ಓರಮ್ ಅವರ ತಂದುಕೊಟ್ಟ ಗೋಲು ಮತ್ತೆ ಮುನ್ನಡೆ ಒದಗಿಸಿತು. 44ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೂಲಕ ರಾಬಿನ್ ಯಾದವ್ ನಿಬ್ಬೆರಗಾಗುವಂತಹ ಗೋಲು ದಾಖಲಿಸಿದ್ದು, ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ ಕರ್ನಾಟಕ 3-1 ಗೋಲುಗಳ ಮುನ್ನಡೆ ಪಡೆಯಲು ಸಾಧ್ಯವಾಯಿತು. ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಮೇಘಾಲಯ ತಂಡವೂ ಚೆಂಡಿನ ಮೇಲೆ ನಿಧಾನವಾಗಿ ಹಿಡಿತ ಸಾಧಿಸಲು ಮುಂದಾಯಿತು.