ಕರ್ನಾಟಕ

karnataka

ETV Bharat / sports

ಫಾರ್ಮುಲಾ 1 ರೇಸ್​​​ ಕನಸಿನತ್ತ ಭಾರತದ ರೇಸರ್ ಜೇಹನ್.. ಮುಟ್ಟುವರೇ ನಿಖರ ಗುರಿ! - ಫಾರ್ಮುಲಾ 1ಗೆ ಜೇಹನ್ ದಾರುವಾಲಾ

ರೇಸರ್ ಜೇಹನ್ ದಾರುವಾಲಾ ಅವರು ಎಫ್2 ಹಾಲಿ ಚಾಂಪಿಯನ್ ತಂಡವಾದ ಇಟಲಿಯ ಪ್ರೆಮಾ ರೇಸಿಂಗ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಫಾರ್ಮುಲಾ 1ಗೆ ಎಂಟ್ರಿ ಕೊಡಲು ಜೇಹನ್ ತುದಿಗಾಲಲ್ಲಿ ನಿಂತಿದ್ದಾರೆ.

ಭಾರತದ ರೇಸರ್ ಜೇಹನ್
ಭಾರತದ ರೇಸರ್ ಜೇಹನ್

By

Published : Jan 15, 2022, 9:18 AM IST

ಮುಂಬೈ: ಭಾರತದ ಟಾಪ್ ರೇಸರ್ ಜೇಹನ್ ದಾರುವಾಲಾ ಅವರು ಫಾರ್ಮುಲಾ 1ಗೆ ಕಾಲಿಡುವ ಕನಸು ನನಸಾಗುವ ದಿನಗಳು ಹತ್ತಿರವಾದಂತಿವೆ. ಎಫ್2 ಚಾಂಪಿಯನ್ ತಂಡವಾದ ಇಟಲಿಯ ಪ್ರೆಮಾ ರೇಸಿಂಗ್ ಪರ ಈ ವರ್ಷ ಕಣಕ್ಕಿಳಿಯಲು ಜೇಹನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಮುಂಬೈ ಮೂಲದ 23 ವರ್ಷದ ಚಾಲಕ ಸತತ 3ನೇ ವರ್ಷವೂ ರೆಡ್‌ಬುಲ್ ಕಿರಿಯರ ತಂಡದೊಂದಿಗೂ ಮುಂದುವರಿಯಲಿದ್ದಾರೆ. ರೆಡ್‌ಬುಲ್ ತಂಡವು 4 ಬಾರಿ ಎಫ್1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್, ಹಾಲಿ ಎಫ್1 ಚಾಂಪಿಯನ್ ಮ್ಯಾಕ್ಸ್ ವರ್ಸ್ಟಾಪ್ಪೆನ್, ರೇಸ್ ವಿಜೇತರಾದ ಡೇನಿಯಲ್ ರಿಕಾರ್ಡೊ, ಪೀಯರ್ ಗ್ಯಾಸ್ಲಿ ಸೇರಿ ಅನೇಕ ಚಾಲಕರನ್ನು ಬೆಳೆಸಿದೆ.

ಜೇಹನ್ ಈಗಾಗಲೇ ಎಫ್ 2 ಚಾಂಪಿಯನ್‌ಶಿಪ್‌ನಲ್ಲಿ ಹಲವು ಜಯ, ಪೋಡಿಯಂ ಫಿನಿಶ್‌ಗಳನ್ನು ಸಾಧಿಸಿದ್ದಾರೆ. ಇನ್ನು ಈ ವರ್ಷ ತಮ್ಮ ಅತ್ಯದ್ಭುತ ಲಯ, ಅಸಾಧಾರಣ ವೇಗದಿಂದ ಪ್ರೆಮಾ ರೇಸಿಂಗ್ ತಂಡವು ಸತತ 3ನೇ ವರ್ಷವೂ ಚಾಲಕರ ಚಾಂಪಿಯನ್‌ಶಿಪ್ ಪಟ್ಟ ಗಳಿಸುವಂತೆ ಮಾಡುವುದು ಜೇಹನ್‌ರ ಗುರಿಯಾಗಿದೆ.

ಭಾರತದ ರೇಸರ್ ಜೇಹನ್

ಈ ವರ್ಷ ಎಫ್2 ಸೀರೀಸ್ ಒಟ್ಟು 14 ಸುತ್ತುಗಳನ್ನು ಒಳಗೊಂಡಿದ್ದು, 28 ರೇಸ್‌ಗಳು ನಡೆಯಲಿವೆ. ಮಾರ್ಚ್ 18, 2022ರಂದು ಬಹರೈನ್‌ನಲ್ಲಿ ಆರಂಭಗೊಳ್ಳಲಿರುವ ರೇಸ್​, 2022ರ ನವೆಂಬರ್ 20ರಂದು ಅಬುಧಾಬಿಯಲ್ಲಿ ಕೊನೆಗೊಳ್ಳಲಿದೆ. ಎಲ್ಲ ರೇಸ್‌ಗಳು ಎಫ್1 ಸ್ಪರ್ಧೆಗೆ ಪೂರಕವಾಗಿ ನಡೆಯಲಿವೆ. 2020ರಲ್ಲಿ ಮಿಕ್ ಶೂಮಾಕರ್ ಹಾಗೂ ಕಳೆದ ವರ್ಷ ಆಸ್ಟ್ರೇಲಿಯಾದ ಆಸ್ಕರ್ ಪಿಯಾಸ್ಟಿ ಅವರು ಪ್ರೆಮಾ ರೇಸಿಂಗ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ವರ್ಷ ಜೇಹನ್ ಅವರು ತಂಡಕ್ಕೆ ಹ್ಯಾಟ್ರಿಕ್ ಪ್ರಶಸ್ತಿ ತಂದುಕೊಡಲು ಕಾತುರರಾಗಿದ್ದಾರೆ.

ಜೇಹನ್ ದಾರುವಾಲಾ:

ಜೇಹನ್ ದಾರುವಾಲಾ ಮುಂಬೈ ಮೂಲದ ರೇಸರ್. 2009ರಲ್ಲಿ ಅವರಿಗೆ 10 ವರ್ಷ ವಯಸ್ಸಿದಾಗ ಕಾರ್ಟಿಂಗ್ ಆರಂಭಿಸಿದರು. 2 ವರ್ಷಗಳ ಬಳಿಕ ಫೋರ್ಸ್ ಇಂಡಿಯಾದ 'ಒನ್ ಇನ್ ಎ ಬಿಲಿಯನ್' ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಮೂವರ ಪೈಕಿ ಜೇಹನ್ ಸಹ ಒಬ್ಬರು. 2013ರಲ್ಲಿ ಬ್ರಿಟಿಷ್ ಕೆಎಫ್3 ಕಾರ್ಟಿಂಗ್ ಚಾಂಪಿಯನ್‌ಶಿಪ್ ಗೆದ್ದ ಏಷ್ಯಾದ ಮೊದಲ ಚಾಲಕ ಎನ್ನುವ ದಾಖಲೆಯನ್ನು ಅವರು ಬರೆದರು. ಜೇಹನ್ ತಾವು ಸ್ಪರ್ಧಿಸಿರುವ ಪ್ರತಿಯೊಂದು ವಿಭಾಗದಲ್ಲೂ ಗೆಲುವು ಸಾಧಿಸಿದ್ದಾರೆ ಎನ್ನುವುದು ಗಮನಾರ್ಹ.

ಸದ್ಯ ಜೇಹನ್ ಎಫ್‌ಐಎ ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಫ್ 2 ವಿಭಾಗವು ಎಫ್ 1ಗೆ ಕಾಲಿಡುವ ಮೊದಲು ಚಾಲಕರಿಗೆ ಉತ್ಕೃಷ್ಟ ಮಟ್ಟದ ರೇಸಿಂಗ್ ಅನುಭವ ಒದಗಿಸಲಿವೆ. ಎಫ್1 ರೇಸ್‌ಗಳು ನಡೆಯುವ ಸಮಯದಲ್ಲೇ ಈ ರೇಸ್‌ಗಳು ನಡೆಯಲಿವೆ.

ಎಫ್2 ವಿಭಾಗದಲ್ಲಿ ಈಗಾಗಲೇ ಹಲವು ರೇಸ್‌ಗಳನ್ನು ಗೆದ್ದಿರುವ ಜೇಹನ್, 2022ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಗುರಿ ಹೊಂದಿದ್ದಾರೆ. ಇದರೊಂದಿಗೆ ಫಾರ್ಮುಲಾ 1 ರೇಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 3ನೇ ಚಾಲಕ ಎನ್ನುವ ಹಿರಿಮೆಗೆ ಪಾತ್ರರಾಗುವ ಕನಸು ಕಾಣುತ್ತಿದ್ದಾರೆ.

ABOUT THE AUTHOR

...view details