ಟೋಕಿಯೊ:ಕೆನಡಾ ಓಪನ್ 2023 ವಿಜೇತ ಲಕ್ಷ್ಯ ಸೇನ್ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಮ್ಮ ಪ್ರಯಾಣ ಅಂತ್ಯಗೊಳಿಸಿದ್ದಾರೆ. ಭಾರತಕ್ಕೆ ಸೇನ್ ಅವರಿಂದ ಒಂದು ಪ್ರಶಸ್ತಿಯ ನಿರೀಕ್ಷೆ ಇತ್ತು. ಆದರೆ, ಸೆಮಿಸ್ನಲ್ಲಿ ಸೋಲು ಕಂಡ ಸೇನ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಎಡವಿದರು.
ಶನಿವಾರ ನಡೆದ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ವಿಶ್ವದ 9 ನೇ ಶ್ರೇಯಾಂಕಿತ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಜೊನಾಟನ್ ಕ್ರಿಸ್ಟಿ ವಿರುದ್ಧ 15-21, 21-13, 16-21 ರಿಂದ ಸೋಲನುಭವಿಸಿದರು. ಇಬ್ಬರ ನಡುವೆ 68 ನಿಮಿಷಗಳ ಕಾಲ ರೋಚಕ ಸ್ಪರ್ಧೆ ಏರ್ಪಟ್ಟಿತು. ಸೇನ್ ಸೋಲು ಕಂಡರೂ ಸುಲಭವಾಗಿ ಸ್ಪರ್ಧೆಯನ್ನು ಬಿಟ್ಟುಕೊಡಲಿಲ್ಲ.
21 ವರ್ಷದ ಯುವ ಸ್ಟಾರ್ ಆಟಗಾರ ಸೇನ್ ತಮ್ಮ ಎದುರಾಳಿಯ ಮೇಲೆ ಮೊದಲ ಸೆಟ್ನಲ್ಲಿ ಪ್ರತಿರೋಧ ಒಡ್ಡುವಲ್ಲಿ ವಿಫಲರಾದರು. ವಿಶ್ವದ 9 ನೇ ಶ್ರೇಯಾಂಕಿತ ಜೊನಾಟನ್ ಕ್ರಿಸ್ಟಿ ಮುನ್ನಡೆಯನ್ನು ಕಾಯ್ದುಕೊಂಡು 15-21 ರಿಂದ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್ನಲ್ಲಿ ಪುಟಿದೆದ್ದ ಸೇನ್, ಕ್ರಿಸ್ಟಿ ವಿರುದ್ಧ ಬಲಿಷ್ಟ ಹೋರಾಟವನ್ನು ತೋರಿದರು. ಮೊದಲ ಸೆಟ್ನ ವೈಫಲ್ಯಗಳನ್ನು ತಿದ್ದಿಕೊಂಡ ಲಕ್ಷ್ಯ ಎರಡನೇ ಗೇಮ್ನಲ್ಲಿ ಉತ್ತಮ ಮುನ್ನಡೆ ಪಡೆದುಕೊಂಡರು.