ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನಾಮ ನಿರ್ದೇಶನ ಮಾಡಿದೆ. 2024ರ ಜನವರಿ 9ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಆಟಗಾರರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. ನಮಗೆ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ದೊಡ್ಡ ಗೌರವ ಎಂದು ಚಿರಾಗ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. "ಒಬ್ಬ ಕ್ರೀಡಾಪಟುವಾಗಿ ಈ ಪ್ರಶಸ್ತಿ ಸ್ವೀಕರಿಸುವುದು ನಿಜವಾಗಿಯೂ ದೊಡ್ಡ ಗೌರವ. ನಾವೆಲ್ಲರೂ ಪದಕಗಳನ್ನು ಗೆಲ್ಲಲು ಮತ್ತು ಅತ್ಯುತ್ತಮ ಗೌರವಗಳನ್ನು ಗಳಿಸಲು ಸಾಕಷ್ಟು ಶ್ರಮಿಸುತ್ತೇವೆ. ಪ್ರಶಸ್ತಿಯು ನಮ್ಮನ್ನು ಇನ್ನಷ್ಟು ಶ್ರಮಿಸುವಂತೆ ಉತ್ತೇಜಿಸುತ್ತದೆ" ಎಂದು ಹರ್ಷ ವ್ಯಕ್ತಪಡಿಸಿದರು.
'ಸಾತ್-ಚಿ' ಪಯಣ:'ಸಾತ್-ಚಿ' ಎಂದು ಜನಪ್ರಿಯವಾಗಿರುವ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಈ ವರ್ಷ ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಮೊಟ್ಟಮೊದಲ ಬ್ಯಾಡ್ಮಿಂಟನ್ ಚಿನ್ನ ಗೆದ್ದರು. ಏಪ್ರಿಲ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಜಯಿಸಿದ್ದರು.