ನವದೆಹಲಿ: ಐಎಸ್ಎಸ್ಎಫ್ ವಿಶ್ವಕಪ್ನ ಸ್ಕೀಟ್ ವಿಭಾಗದಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕ ಪಡೆದರೆ, ಮಹಿಳಾ ತಂಡ ಕಜಕಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಕಂಡಿದೆ.
ಮೈರಾಜ್ ಅಹಮದ್ ಖಾನ್, ಗುರುಜೋತ್ ಖಂಗುರ ಮತ್ತು ಅಂಗದ್ ಬಾಜ್ವಾ ಇದ್ದ ತಂಡ ಫೈನಲ್ ಹೋರಾಟದಲ್ಲಿ 6-2ರಿಂದ ಕತಾರ್ ತಂಡವನ್ನು ಸೋಲಿಸಿ ಚಿನ್ನದ ಪದಕ ಪಡೆಯಿತು. ಕತಾರ್ ತಂಡದಲ್ಲಿ ನಾಸರ್ ಅಲ್ ಅತಿಯಾ, ಅಲಿ ಅಹಮದ್ ಇಷಾಕ್ ಹಾಗೂ ರಶೀದ್ ಹಮಾದ್ ಸ್ಪರ್ಧಿಸಿದ್ದರು.
ಮಹಿಳೆಯರ ಸ್ಕೀಟ್ ವಿಭಾಗದ ಫೈನಲ್‌ನಲ್ಲಿ ಪರಿನಾಜ್ ಧಲಿವಾಲ್, ಕಾರ್ತಿಕಿ ಸಿಂಗ್ ಶಕ್ತಾವತ್ ಹಾಗೂ ಗಣೆಮತ್ ಶೆಕೋನ್ ಅವರನ್ನೊಳಗೊಂಡ ಭಾರತ ತಂಡವು 4-6ರಿಂದ ಕಜಕಸ್ತಾನದ ರಿನಾತ ನಾಸ್ಸಿರೊವಾ, ಓಲ್ಗಾ ಪನಾರಿನಾ ಹಾಗೂ ಜೋಯಾ ಕ್ರಾವ್‌ಚೆಂಕೊ ಅವರೆದುರು ಮಣಿದು ಬೆಳ್ಳಿ ಪದಕ ಪಡೆಯಿತು.
ವಿಶ್ವಕಪ್ನ 4ನೇ ದಿನದಂತ್ಯಕ್ಕೆ ಭಾರತ 6 ಚಿನ್ನ, 4 ಬೆಳ್ಳಿ ಮತ್ತು 4 ಕಂಚುಗಳೊಂದಿಗೆ ಒಟ್ಟು 14 ಪಂದಕ ಪಡೆದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಸೇರಿ 6 ಪದಕ ಪಡೆದ ಅಮೆರಿಕ 2ನೇ ಸ್ಥಾನದಲ್ಲಿದೆ.