ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು. ಮೂರು ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಹಿರಿಮೆ ಇವರದ್ದು. ಧೋನಿ ಆಟದ ರೀತಿ, ತಂಡ ಮುನ್ನಡೆಸಿದ ಪರಿ ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ. ಅಂಥವರಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್, ಇಶಾನ್ ಕಿಶನ್ ಕೂಡ ಒಬ್ಬರು. ಮಹಿ ಮೇಲಿನ ಅಭಿಮಾನ, ತಮ್ಮ ಕ್ರಿಕೆಟ್ ಜರ್ನಿ ಹಾಗೂ ಇಷ್ಟಗಳ ಕುರಿತು ಇಶಾನ್ ಕಿಶನ್ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
"ಧೋನಿ ಬಾಲ್ಯದಿಂದಲೂ ನನ್ನ ನೆಚ್ಚಿನ ಕ್ರಿಕೆಟ್ ಆರಾಧ್ಯದೈವ. ನಾನೂ ಸಹ ರಣಜಿಯಲ್ಲಿ ಜಾರ್ಖಂಡ್ ತಂಡದ ಪರ ಆಡುತ್ತಿದ್ದೇನೆ. ಹಾಗಾಗಿ ನಾನು ಧೋನಿ ಅವರ ಸ್ಥಾನ ತುಂಬಲು ಬಯಸುತ್ತೇನೆ. ಸದ್ಯ ತಂಡ ಹೆಚ್ಚಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವಂತಾಗಲು ನಾನು ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ" ಎಂದು ಕಿಶನ್ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್‌ಕೀಪರ್ ಆಗಿರುವ ಕಿಶನ್, ತಾವು ಧೋನಿಯಿಂದ ಆಟೋಗ್ರಾಫ್ ಪಡೆದ ಘಟನೆಯನ್ನು ನೆನಪಿಸಿಕೊಂಡರು. ''ಹಿಂದೊಮ್ಮೆ ನಾನು ಎಂ.ಎಸ್.ಧೋನಿ ಅವರಿಂದ ಆಟೋಗ್ರಾಫ್ ಪಡೆದಿದ್ದೆ. 18 ವರ್ಷದವನಿದ್ದಾಗ ಮೊದಲ ಬಾರಿಗೆ ಅವರನ್ನು ನೋಡಿ ಬಹಳ ಖುಷಿಪಟ್ಟಿದ್ದೆ. ಅದು ನನಗೆ ಸ್ಮರಣೀಯ ಕ್ಷಣ. ಆ ಕ್ಷಣ ನನಗೀಗಲೂ ನೆನಪಿದೆ. ನನ್ನ ಬ್ಯಾಟ್ ಮೇಲೆ ಅವರ ಹಸ್ತಾಕ್ಷರವಿದೆ" ಎಂದು ಇಶಾನ್ ಹೆಮ್ಮೆಯಿಂದ ಹೇಳಿಕೊಂಡರು.
''ನಾನು 14ನೇ ವಯಸ್ಸಿನಲ್ಲಿರುವಾಗಲೇ ನಮ್ಮ ಕುಟುಂಬವು ಜಾರ್ಖಂಡ್ಗೆ ತೆರಳಿ ನೆಲೆಸಿತ್ತು. ಆಗ ನಾನು ಭಾರತ ಕ್ರಿಕೆಟ್ ತಂಡದ ಪರ ಆಡಬೇಕೆಂಬ ಗುರಿ ಹೊಂದಿದ್ದೆ. ಬಳಿಕ ಅಂಡರ್ 19 ತಂಡದಲ್ಲಿ ಆಡಿದೆ. ಇದೀಗ ಭಾರತ ತಂಡದಲ್ಲಿಯೂ ಆಡುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಇದೊಂದು ದೀರ್ಘವಾದ ಪಯಣ'' ಎಂದು ತಮ್ಮ ಕ್ರಿಕೆಟ್ ಜರ್ನಿಯನ್ನೊಮ್ಮೆ ಮೆಲುಕು ಹಾಕಿದರು.
''ನನ್ನ ಜೆರ್ಸಿ ನಂಬರ್ 32. ಆದರೆ ನನಗೆ ನಂಬರ್ 23 ಬೇಕೆಂದು ಕೇಳಿದ್ದೆ. ಆ ನಂಬರ್ ಅದಾಗಲೇ ಕುಲದೀಪ್ ಯಾದವ್ ಪಾಲಾಗಿತ್ತು. ಹೀಗಾಗಿ ನಾನು ನನ್ನ ಅಮ್ಮನ ಬಳಿಕ ಯಾವ ನಂಬರ್ ತೆಗೆದುಕೊಳ್ಳಲೆಂದು ಕೇಳಿದ್ದೆ. ಆಗ ಅವರು 'ನಂಬರ್ 32' ಸೂಚಿಸಿದರು. ಇದಕ್ಕೆ ಮರುಮಾತನಾಡದೇ ಒಪ್ಪಿಕೊಂಡೆ. ಇದು ನನ್ನ ಜೆರ್ಸಿ ಹಿಂದಿನ ಹಿನ್ನೆಲೆ'' ಎಂದು ಇಶಾನ್ ಹೇಳಿಕೊಂಡರು.
ಇಶಾನ್ ಕಿಶನ್ ಸಾಧನೆ: ಯುವ ಆಟಗಾರ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹೊಸಬರೆಂದೇ ಹೇಳಬಹುದು. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಇವರಿಗೆ ತಂಡದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಕಿಶನ್, ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದು ಏಕದಿನ ಕ್ರಿಕೆಟ್ನಲ್ಲಿ ದಾಖಲಾದ ಅತಿವೇಗದ ಶತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದು ಇಶಾನ್ ಕಿಶನ್ 85 ಎಸೆತಗಳಲ್ಲಿ ಚೊಚ್ಚಲ ಶತಕ ದಾಖಲಿಸಿದ್ದರಲ್ಲದೆ, ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿ ದ್ವಿಶತಕದ ಸಾಧನೆಗೈದಿದ್ದರು. 126 ಎಸೆತಗಳಲ್ಲಿ ವೇಗದ ದ್ವಿಶತಕ ದಾಖಲಿಸಿ ಮಿಂಚಿದ್ದರು.
ಇದೀಗ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿ ಹೊರಹೊಮ್ಮಿದ್ದಾರೆ. ಇಂದಿನಿಂದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಿಶನ್ ವಿಕೆಟ್ ಕೀಪರ್ ಆಗಿ ಮೈದಾನಕ್ಕಿಳಿಯಲಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗವಾಸ್ಕರ್-ಬಾರ್ಡರ್ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ಆಯ್ಕೆ ಆಗಿದ್ದಾರೆ. ಜಾರ್ಖಂಡ್ ವಿಕೆಟ್‌ಕೀಪರ್-ಬ್ಯಾಟರ್ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ತೋರಲು ಉತ್ಸುಕರಾಗಿದ್ದಾರೆ.
ಈಗಾಗಲೇ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇಂದಿನಿಂದ ಕಿವೀಸ್ ತಂಡದ ಜೊತೆ ಟಿ20 ಸರಣಿ ನಡೆಯಲಿದೆ. ಚುಟುಕು ಸರಣಿಯನ್ನೂ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದೆ ಟೀಂ ಇಂಡಿಯಾ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿದ ಯುವ ಕ್ರಿಕೆಟರ್ ಇಶಾನ್ ಕಿಶನ್