ಕರ್ನಾಟಕ

karnataka

ETV Bharat / sports

ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌: ಪಾಕ್​ಗೆ ತೆರಳಿರುವುದು ಭಾರತ ತಂಡವಲ್ಲ, ಹಾಗಾದ್ರೆ ಯಾರವರು?

ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದ ತಂಡವೊಂದು ಪಾಕ್​ಗೆ ತೆರಳಿದೆ ಆದರೆ ಯಾವುದೇ ತಂಡಕ್ಕೆ ಇಂತಾ ಅನುಮತಿ ನೀಡಲಿಲ್ಲ ಎಂದು ಭಾರತೀಯ ಒಲಂಪಿಕ್‌ ಒಕ್ಕೂಟ ಮಾಹಿತಿ ನೀಡಿದೆ.

By

Published : Feb 10, 2020, 5:56 PM IST

India Kabaddi team reaches Pakistan,ಪಾಕಿಸ್ತಾನಕ್ಕೆ ತೆರಳಿರುವುದು ಭಾರತ ತಂಡವಲ್ಲ
ಪಾಕಿಸ್ತಾನಕ್ಕೆ ತೆರಳಿರುವ ಕಬಡ್ಡಿ ತಂಡ

ನವದೆಹಲಿ: ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದ ತಂಡವೊಂದು ಪಾಕ್​ಗೆ ತೆರಳಿದ್ದು, ಈ ವಿಷಯ ತಿಳಿದು ಭಾರತೀಯ ಒಲಿಂಪಿಕ್‌ ಒಕ್ಕೂಟಕ್ಕೆ ಶಾಕ್ ಆಗಿದೆ.

ಪಾಕಿಸ್ತಾನಕ್ಕೆ ತೆರಳಿರುವ ಕಬಡ್ಡಿ ತಂಡ

ಇದೇ ವಿಷಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ, ಭಾರತೀಯ ಒಲಿಂಪಿಕ್‌ ಒಕ್ಕೂಟದ ಮುಖ್ಯಸ್ಥ ನರೀಂದರ್‌ ಬಾತ್ರಾ, ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಶನಿವಾರ ಪಾಕಿಸ್ತಾನಕ್ಕೆ ತೆರಳಿರುವ ತಂಡ ಭಾರತದ ಅಧಿಕೃತ ತಂಡವಲ್ಲ. ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್‌ಐ) ಅನುಮೋದಿಸದ ಕಾರಣ ಅವರು 'ಭಾರತ' ಎಂಬ ಪದವನ್ನು ಬಳಸುವಂತಿಲ್ಲ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತ ತಂಡವು ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದೆ ಎಂದು ಹೇಳಲಾಗುತ್ತಿದ್ದು, ಅವರು ದೇಶದ ಬಾವುಟ ಹಿಡಿದಿರುವ ಗ್ರೂಪ್‌ ಫೋಟೋ ಹಾಗೂ ಎಲ್ಲ ತಂಡದ ನಾಯಕರು ಟ್ರೋಫಿ ಜೊತೆಗೆ ನಿಂತಿರುವ ಫೋಟೋ ವೈರಲ್‌ ಆಗಿದೆ.

ಇಲ್ಲಿಯವರೆಗೆ ನಾವು ನಮ್ಮ ತಂಡವನ್ನು ಪ್ರಕಟಿಸಿಲ್ಲ. ಹಾಗಾಗಿ ಪಾಕಿಸ್ತಾನಕ್ಕೆ ತೆರಳಿರುವರು ‘ಭಾರತ’ ಎಂಬ ಪದವನ್ನು ಬಳಸುವಂತಿಲ್ಲ. ಐಒಎ ಮತ್ತು ಸರ್ಕಾರದ ಅನುಮತಿ ಇದ್ದರೆ ಮಾತ್ರ ಬಳಸಬಹುದು. ಭಾರತದ ಪಾಸ್‌ಪೋರ್ಟ್‌ ಇರುವ ಕೆಲವರು ಹೋಗಿ ಪಾಕಿಸ್ತಾನಕ್ಕೆ ತೆರಳಿ ಭಾರತ ತಂಡವಾಗಿ ಆಡಬಹುದಾದರೆ, ಅದು ಕ್ರೀಡೆ ಸಾಗಬೇಕಾದ ರೀತಿಯಲ್ಲ. ಇದು ನನ್ನ ಮಿತಿಯನ್ನು ಮೀರಿರುವುದರಿಂದ ಈ ಕುರಿತು ಪಾಕಿಸ್ತಾನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಪಾಕಿಸ್ತಾನ ತನ್ನಿಷ್ಟದಂತೆ ಮಾಡಲಿ ಎಂದು ಬಾತ್ರಾ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಹೋಗಿ ಕಬಡ್ಡಿ ಪಂದ್ಯವನ್ನು ಆಡಲು ಎಕೆಎಫ್‌ಐ ಯಾವುದೇ ತಂಡಕ್ಕೆ ಅನುಮತಿ ನೀಡಿಲ್ಲ. ಮಾಹಿತಿ ಕೋರಿದ ನಂತರವೇ ನಾವು ಇದರ ಬಗ್ಗೆ ತಿಳಿದುಕೊಂಡಿದ್ದೇವೆ. ಎಕೆಎಫ್ಐ ಅಂತಹ ಯಾವುದೇ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ. ತಪ್ಪು ಎಸಗಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಎಕೆಎಫ್‌ಐ ಅಧ್ಯಕ್ಷ ನ್ಯಾ. ಎಸ್‌.ಪಿ.ಗರ್ಗ್ ತಿಳಿಸಿದ್ದಾರೆ.

ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌

ಮೂರು ನಗರಗಳಲ್ಲಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ 10 ರಾಷ್ಟ್ರಗಳ ತಂಡಗಳು ಭಾಗವಹಿಸುತ್ತಿವೆ ಎಂದು ವಿಶ್ವ ಚಾಂಪಿಯನ್‌ಶಿಪ್ ಸಂಘಟಕರು ತಿಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 24 ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿದೆ. ಪಾಕಿಸ್ತಾನ, ಭಾರತ, ಕೆನಡಾ, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಇರಾನ್, ಕೀನ್ಯಾ, ಸಿಯೆರಾ ಲಿಯೋನ್ ಮತ್ತು ಅಜೆರ್ಬೈಜಾನ್ 10 ದೇಶಗಳ ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ABOUT THE AUTHOR

...view details