ನವದೆಹಲಿ: ಮುಂದಿನ ವರ್ಷದವರೆಗೆ ಜಾಹೀರಾತುಗಳು ಕೈ ಹಿಡಿಯುವ ಸಾಧ್ಯತೆ ಕಡಿಮೆಯಿರುವುದರಿಂದ ವಿವಿಧ ಕ್ರೀಡಾಚಟುವಟಿಕೆಗಳನ್ನು ನಿರ್ವಹಿಸಲು ಕ್ರೀಡಾ ಆಡಳಿತ ಮಂಡಳಿಗಳಿಗೆ ಒಂದೇ ಕಂತಿನಲ್ಲಿ 200 ಕೋಟಿ ರೂಗಳ ಆರ್ಥಿಕ ನೆರವು ನೀಡುವಂತೆ ಭಾರತೀಯ ಒಲಿಂಪಿಕ್ ಒಕ್ಕೂಟ ಕ್ರೀಡಾಸಚಿವಾಲಯಕ್ಕೆ ಮನವಿ ಮಾಡಿದೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ಭೀತಿಯಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ನಿಂತಿವೆ. ಈ ಸಂದರ್ಭದಲ್ಲಿ ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಅವರು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, ಕೇಂದ್ರದಿಂದ ಹಣಕಾಸಿನ ನೆರವು ಲಭಿಸದೆ ಹೋದರೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಕಷ್ಟವಾಗುತ್ತದೆ ಎಂದಿದ್ದಾರೆ.
ಬಾತ್ರಾ ಅವರು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಐಒಎಗೆ 10 ಕೋಟಿ ರೂ, ಒಲಿಂಪಿಕ್ ಸ್ಪೋರ್ಟ್ಸ್ನ ಪ್ರತಿಯೊಂದು ರಾಷ್ಟ್ರೀಯ ಸ್ಪೋರ್ಟ್ಸ್ ಫೆಡೆರೇಷನ್ಗಳಿಗೆ (ಎನ್‌ಎಸ್‌ಎಫ್) ತಲಾ 5 ಕೋಟಿ ರೂ., ಒಲಿಂಪಿಕ್ಸ್ ಸ್ಪೋರ್ಟ್ಸ್ ವ್ಯಾಪ್ತಿಯಲ್ಲಿಲ್ಲದ ಎನ್‌ಎಸ್‌ಎಫ್‌ಗಳಿಗೆ ತಲಾ 2.5 ಕೋಟಿ ರೂ., ಪ್ರತಿಯೊಂದು ರಾಜ್ಯ ಒಲಿಂಪಿಕ್ ಅಸೋಸಿಯೇಷನ್‌ಗಳಿಗೆ ತಲಾ ಒಂದು ಕೋಟಿ ರೂ. ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.
ಕೋವಿಡ್ ಭೀತಿ ಹಾಗೂ ಲಾಕ್ಡೌನ್ ಇರುವ ಇಂತಹ ಪರಿಸ್ಥಿತಿಯಲ್ಲಿ ಕ್ರೀಡಾ ಆಡಳಿತ ಮಂಡಳಿಗಳಿಗೆ ಸ್ಪಾನ್ಸರ್ಶಿಪ್ ಸಿಗುವುದು ಕಷ್ಟ. ಇದರಿಂದ ಕ್ರೀಡಾ ಚಟುವಟಿಕೆ ಪುನರಾರಂಭ ಹಾಗೂ ತರಬೇತಿಗೆ ಹಿನ್ನಡೆಯಾಗಲಿದೆ ಎಂದು ನರೀಂದರ್ ಬಾತ್ರಾ ಪತ್ರದಲ್ಲಿ ತಿಳಿಸಿದ್ದಾರೆ.