ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಬುಧವಾರ ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಕಾರ್ಯಾಚರಣೆಗಳನ್ನು ನಡೆಸಲು ಮೂವರು ಸದಸ್ಯರ ತಾತ್ಕಾಲಿಕ ಸಮಿತಿ ರಚಿಸಿದೆ. ಕ್ರೀಡಾ ಸಚಿವಾಲಯವು ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನೂತನವಾಗಿ ಆಯ್ಕೆಯಾಗಿದ್ದ ರಾಷ್ಟ್ರೀಯ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದೆ.
ವುಶು ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಸಮಿತಿಯ ಅಧ್ಯಕ್ಷರಾಗಿದ್ದರೆ, ಹಾಕಿ ಒಲಿಂಪಿಯನ್ ಎಂಎಂ ಸೋಮಯ ಮತ್ತು ಮಾಜಿ ಅಂತರರಾಷ್ಟ್ರೀಯ ಶಟ್ಲರ್ ಮಂಜುಷಾ ಕನ್ವರ್ ಸಮಿತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಿದ ನಂತರ ಕ್ರೀಡಾ ಸಚಿವಾಲಯವು ಮುಂದಿನ 48 ಗಂಟೆಗಳೊಳಗೆ ಹೊಸ ಸಮಿತಿ ರಚಿಸುವಂತೆ ಐಒಎಗೆ ತಿಳಿಸಿತ್ತು.
"ಹೊಸದಾಗಿ ಚುನಾಯಿತರಾದ ಡಬ್ಲ್ಯುಎಫ್‌ಐ ಅಧ್ಯಕ್ಷರು ಮತ್ತು ಅಧಿಕಾರಿಗಳು ತಾವು ಅನುಸರಿಸಬೇಕಾದ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವ ಅನಿಯಂತ್ರಿತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಉತ್ತಮ ಆಡಳಿತದ ತತ್ವಗಳಿಗೆ ಅಡ್ಡಿಪಡಿಸಿದ್ದಾರೆ" ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಪ್ರಕಟಣೆಯಲ್ಲಿ ದೂರಿದ್ದಾರೆ.
ಡಬ್ಲ್ಯುಎಫ್‌ಐನ ಕಾರ್ಯಾಚರಣೆಗಳನ್ನು ನಿರ್ವಹಿಸುವ ಹೊಣೆಯನ್ನು ತಾತ್ಕಾಲಿಕ ಸಮಿತಿಗೆ ವಹಿಸಲಾಗಿದೆ. ಅವರು ಕ್ರೀಡಾಪಟುಗಳ ಆಯ್ಕೆ, ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಮೂದುಗಳನ್ನು ಸಲ್ಲಿಸುವುದು, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದು, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು, ವೆಬ್‌ಸೈಟ್ ನಿರ್ವಹಣೆ ಮತ್ತು ಇತರ ಸಂಬಂಧಿತ ಜವಾಬ್ದಾರಿಗಳನ್ನು ಒಳಗೊಂಡಿರುತ್ತಾರೆ.