ಹೈದರಾಬಾದ್: ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಏಕೈಕ ಬಾಕ್ಸರ್ ಆಗಿರುವ ಲವ್ಲಿನಾ ಬೊರ್ಗೊಹೈನ್ ತಾವು ಈ ಬಾರಿ ಕಂಚು ಗೆದ್ದಿರುವುದು ಖುಷಿಯಿದೆ. ಆದರೆ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಕನಸನ್ನು ಹೊಂದಿದ್ದೇನೆ ಎಂದು 'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕ್ರಿಕೆಟ್ ಆಟವನ್ನೇ ಹೆಚ್ಚಾಗಿ ಪ್ರೀತಿಸುವ ಭಾರತದಂತಹ ರಾಷ್ಟ್ರ ಈ ಬಾರಿ ಕೋವಿಡ್ ಸಂಕಷ್ಟದ ನಡುವೆ ನಡೆದ ಒಲಿಂಪಿಕ್ಸ್ ವೇಳೆ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸಲು ನಿರ್ಧರಿಸಿ ಕ್ರಿಕೆಟ್ನಿಂದ ಒಲಿಂಪಿಕ್ಸ್ಗೆ ಚಾನಲ್ ಬದಲಾಯಿಸಿದ್ದರು ಎನ್ನುವುದು ಸತ್ಯದ ಸಂಗತಿ. ಕ್ರೀಡಾಪಟುಗಳು ಜಪಾನ್ ರಾಜಧಾನಿಯಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದರೆ, ಇಲ್ಲಿ ಕೋಟ್ಯಂತರ ಮಂದಿ ಅಭಿಮಾನಿಗಳು ಅಲ್ಲಿ ನಮ್ಮವರು ಗೆದ್ದರೆ ತಾವೇ ಗೆದ್ದಂತೆ ಸಂಭ್ರಮಿಸುತ್ತಾ, ಸೋತರೆ ಕ್ರೀಡಾಪಟುಗಳ ಬೆಂಬಲಕ್ಕೆ ನಿಂತು ಸಂತೈಸುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.
ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಕೆಲವೇ ಕೆಲವು ಮಂದಿಗೆ ಮಾತ್ರ ತಿಳಿದಿದ್ದ ಅಸ್ಸೋಂ ಬಾಕ್ಸರ್ ಲವ್ಲಿನಾ ಪದಕ ಗೆಲ್ಲುತ್ತಿದ್ದಂತೆ ಇಡೀ ರಾಷ್ಟ್ರದ ಮಗಳಾದಳು. ಸೆಮಿಫೈನಲ್ ಪ್ರವೇಶಿಸುತ್ತಿದ್ದಂತೆ ಮುಂದಿನ ಪಂದ್ಯಕ್ಕಾಗಿ ಲವ್ಲಿನಾಗಿಂತ ಹೆಚ್ಚು ಕುತೂಹಲದಿಂದ ಭಾರತೀಯ ಅಭಿಮಾನಿಗಳು ಹಾತೊರೆಯುತ್ತಿದ್ದದ್ದು ಸತ್ಯ ಸಂಗತಿ. ಆಕೆಯ ಜೀವನದ ಜೊತೆಗೆ ಆಕೆಯ ಹುಟ್ಟೂರಿನ ಸ್ಥಿತಿಗತಿ ಕೂಡ ಸಂಪೂರ್ಣ ಬದಲಾಗಿದೆ. 'ಈಟಿವಿ ಭಾರತ'ದ ಜೊತೆ ಮಾತನಾಡಿರುವ ಲವ್ಲಿನಾ ತಮ್ಮ ಒಲಿಂಪಿಕ್ಸ್ ಅನುಭವ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಹೇಳಿಕೊಂಡಿದ್ದಾರೆ.
ದೇಶಕ್ಕಾಗಿ ಪದಕ ಗೆದ್ದಿರುವುದು ಹೇಗನ್ನಿಸುತ್ತದೆ?
ನಾನು ಭಾರತಕ್ಕೆ ಪದಕದೊಂದಿಗೆ ಮರಳಿ ಬಂದಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಆದರೆ ಚಿನ್ನ ಗೆದ್ದಿದ್ದರೆ ಖಂಡಿತ ಹೆಚ್ಚು, ಸಂತೋಷವನ್ನುಂಟು ಮಾಡುತ್ತಿತ್ತು.
ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿರುವುದಕ್ಕೆ ನಿಮಗೆ ತೃಪ್ತಿ ತಂದಿಲ್ಲವೇ?
ನನಗೆ ತುಂಬಾ ಬೇಸರವಾಗಿದೆ. ನಾನು ಯಾವುದೇ ಪಂದ್ಯದಲ್ಲಿ ಸೋತು ಹೊರಬೀಳುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಟೋಕಿಯೊದಿಂದ ಭಾರತಕ್ಕೆ ಚಿನ್ನ ಗೆದ್ದ ತರುತ್ತೇನೆಂಬ ಗುರಿಯೊಂದಿಗೆ ಒಲಿಂಪಿಕ್ಸ್ಗೆ ತೆರಳಿದ್ದೆ. ಕೇವಲ ಚಿನ್ನ ಗೆಲ್ಲುವುದಕ್ಕೆ ಮಾತ್ರ ಪಂದ್ಯದ ನಡುವೆ ಆಲೋಚಿಸುತ್ತಿದ್ದೆ. ಆದರೆ ಕಂಚು ಗೆದ್ದ ನಂತರ, ಇದು ಕೇವಲ ಆರಂಭ ಎಂದು ನನ್ನನ್ನು ನಾನು ಸಂತೈಸಿಕೊಂಡೆ. ಅಲ್ಲಿಗೆ ಚಿನ್ನ ಗೆಲ್ಲುವ ಗುರಿ ಅಂತ್ಯವಾಯಿತು. ಹಾಗಾಗಿ ನಾನು ಕಂಚು ಗೆದ್ದಿದ್ದಕ್ಕೆ ಹೆಚ್ಚು ಆನಂದಿಸಲಿಲ್ಲ. ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದರಿಂದ ನನಗೆ ತುಂಬಾ ದುಃಖವಾಯಿತು. ನನ್ನಿಂದ ಭಾರತಕ್ಕೆ ಚಿನ್ನದ ಪದಕ ತಂದುಕೊಡಲು ಸಾಧ್ಯವಾಗದಿದ್ದಕ್ಕೆ ನನ್ನ ಮೇಲೆ ನಾನು ಅಸಮಾಧಾನಗೊಂಡಿದ್ದೆ.
ಹೀಗಲೂ ನಿಮ್ಮಲ್ಲಿ ಸಂತೋಷ ಕಾಣಿಸುತ್ತಿಲ್ಲ ಅನ್ನಿಸುತ್ತಿದೆ?
ನಾನು ಕಾಲಿ ಕೈಯಲ್ಲಿ ಬಂದಿಲ್ಲ, ದೇಶಕ್ಕಾಗಿ ಕಂಚಿನ ಪದಕ ಗೆದ್ದಿರುವುದು ಸಮಾಧಾನ ತಂದಿದೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಈ ಕಂಚನ್ನು ಚಿನ್ನದ ಪದಕವನ್ನಾಗಿ ಪರಿವರ್ತಿಸುವುದಕ್ಕೆ ನಾನು ಸಂಪೂರ್ಣ ಗಮನಹರಿಸುತ್ತೇನೆ. ಖಂಡಿತ ನಾನು ಖುಷಿಯಾಗಿದ್ದೇನೆ. ಆದರೆ ಕಂಚಿನ ಪದಕವನ್ನು ಸಂಭ್ರಮಿಸಲು ಎರಡು ದಿನಗಳನ್ನು ತೆಗೆದುಕೊಂಡಿದ್ದೆ.
ನೀವು ಮರಳಿದಾಗ ಅದ್ದೂರಿ ಸ್ವಾಗತ ಸಿಕ್ಕಿದೆ, ನಿಮಗೆ ಇದರಲ್ಲಿ ತುಂಬಾ ವಿಶೇಷತೆ ಎನಿಸಿದ್ದು ಯಾವುದು?
ಪದಕ ಗೆಲ್ಲುವುದು ಒಂದು ದೇಶಕ್ಕೆ ತುಂಬಾ ಸಂತೋಷವನ್ನು ತರುತ್ತದೆ ಎಂದು ನಿಜವಾಗಿಯೂ ಸಂತೋಷವಾಗುತ್ತದೆ. ಅನೇಕ ಜನರು ನನ್ನ ಸಾಧನೆಯನ್ನು ಆಚರಿಸಲು ಬಂದಿದ್ದು ನನಗೆ ತುಂಬಾ ಸಂತೋಷ ತಂದಿತ್ತು ಮತ್ತು ಅವರೆಲ್ಲಾ ತೋರಿಸಿದ ಪ್ರೀತಿ ನನಗೆ ಯೋಚಿಸಲು ಸಾಧ್ಯವಿಲ್ಲ. ದೇಶಕಕ್ಕಾಗಿ ಪದಕ ಗೆಲ್ಲುವುದು ಯಾರಿಗಾದರೂ ತುಂಬಾ ಸಂತೋಷವನ್ನು ತರುತ್ತದೆ.
ನೀವು ಗೆದ್ದಾಗ ರಾಜಕಾರಣಿಗಳ ಸಹಿತ ಹಲವಾರು ಮಂದಿ ನಿಮಗೆ ಸ್ವಾಗತ ಕೋರಲು ಬಂದರೂ, ಆದರೆ ಕ್ರೀಡಾಪಟುಗಳ ಕಡೆಗೆ ಆರಂಭದಿಂದಲೇ ಗಮನ ಕೊಡಬೇಕು ಎಂದು ನೀವು ಭಾವಿಸುತ್ತೀರಾ? ನೀವು ಬಾಕ್ಸಿಂಗ್ ಆರಂಭಿಸಿದಾಗ ಕಷ್ಟಗಳನ್ನು ಎದುರಿಸಿದ್ದೀರಾ?
ಹೌದು, ನಾನು ಆರಂಭದಲ್ಲಿ ತುಂಬಾ ಕಷ್ಟವಾಗಿತ್ತು. ಆದರೆ ಪದಕ ಗೆದ್ದಾಗಲೇ ಜನರು ನಿಮ್ಮನ್ನು ಗುರುತಿಸುವುದು ಒಳ್ಳೆಯದು. ಏಕೆಂದರೆ ಆಟಗಾರರು ತಯಾರಿಯಲ್ಲಿದ್ದಾಗ ನಿಮ್ಮನ್ನು ಗುರುತಿಸಿದರೆ ಅದು ನಿಮ್ಮ ಸಿದ್ಧತೆಗೆ ತೊಂದರೆಯನ್ನುಂಟು ಮಾಡುತ್ತದೆ. ಯಾರಾದರೂ ನಿಮ್ಮ ಬಳಿಗೆ ಬಂದು, ನೀವು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಹೇಳಿದರೆ, ಅದರಿಂದ ನಿಮ್ಮ ತಯಾರಿ ಹಾಳಾಗುತ್ತದೆ. ಆದ್ದರಿಂದ ಪದಕವನ್ನು ಗೆದ್ದ ಮೇಲೆ ಇದೆಲ್ಲಾ ಆದರೆ ಒಳ್ಳೆಯದು. ನಾವು ಗೆಲುವಿಗಾಗಿ ಶೇ.100 ರಷ್ಟು ಪ್ರಯತ್ನ ಮಾಡಿರುತ್ತೇವೆ. ಹಾಗಾಗಿ ಎಲ್ಲಾ ಆನಂದಕ್ಕೂ ನಾವು ಅರ್ಹರು.
ನಿಮ್ಮ ಗೆಲುವು ಇತರರಿಗೆ ಸ್ಫೂರ್ತಿ ನೀಡುತ್ತದೆ ಎಂದು ನೀವು ಭಾವಿಸುತ್ತೀರಾ?
ಬಹಳಷ್ಟು ಮಕ್ಕಳಿಗೆ ಸ್ಫೂರ್ತಿಯಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಯಾರಾದರೂ ಉತ್ತಮ ಸಾಧನೆ ಮಾಡಿದಾಗ, ಬಹಳಷ್ಟು ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ನಿಜ. ಪದಕವು ಅವರಲ್ಲಿ ಬಹಳಷ್ಟು ಜನರನ್ನು ಪ್ರೇರೇಪಿಸುತ್ತದೆ ಮತ್ತು ಹಳ್ಳಿಗಳಿಂದ ಬರುವ ಜನರ ಕೂಡ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಬಹಳಷ್ಟು ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ ಎಂದು ನಾನು ಭಾವಿಸುತ್ತೇನೆ.
ಕ್ರೀಡೆಯನ್ನು ಆಯ್ಕೆಮಾಡಿಕೊಂಡಾಗ ಆರಂಭದಲ್ಲಿ ಕಷ್ಟ ಅನುಭವಿಸಿದ್ದೀರಾ? ಒಲಿಂಪಿಕ್ಸ್ ತಯಾರಿಗೆ ನಿಮಗೆ ಸಿಕ್ಕ ಬೆಂಬಲ ಹೇಗಿತ್ತು?
ನಾನು ಮೊದಲು ಕ್ರೀಡೆಗೆ ಆಗಮಿಸಿದಾಗ ಹಲವು ಸಮಸ್ಯೆಗಳನ್ನು ಎದುರಿಸಿದ್ದೆ. ಆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಆರಂಭಿಸಿದ ಮೇಲೆ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಮತ್ತು ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ತುಂಬಾ ನೆರವವು ನೀಡಿದವು. ಅವರ ನೆರವಿನಿಂದಲೇ ಇಂದು ಕ್ರೀಡಾಪಟುಗಳು ಇಲ್ಲಿವರೆಗೂ ಸಾಗಿದ್ದಾರೆ. ಆರಂಭದಲ್ಲಿ ಕಷ್ಟಗಳು ಇದ್ದೇ ಇರುತ್ತವೆ. ಆದರೆ ಅವೆಲ್ಲಾ ನೀವು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವವರೆಗೆ ಮಾತ್ರ. ನೀವು ನಂಬಿಕೆಯನ್ನು ಗಳಿಸಿಕೊಂಡರೆ ಜನರೂ ಕೂಡ ನಿಮ್ಮನ್ನು ನಂಬುತ್ತಾರೆ. ಜೊತೆಗೆ ನಿಮ್ಮನ್ನು ನೀವು ಮೊದಲು ನಂಬಬೇಕು. ನಮಗೆ ಸಾಯ್ನಿಂದ ಎಲ್ಲಾ ರೀತಿಯ ಬೆಂಬಲ ಸಿಕ್ಕಿದೆ. ಆದ್ದರಿಂದಲೇ ನಮೆಗೆ ಯಶಸ್ಸು ಸಾಧ್ಯವಾಗಿದೆ.
ಲವ್ಲಿನಾರ ಭವಿಷ್ಯದ ಗುರಿ ಏನು?
ನನ್ನ ಪಯಣ ಯಾವಾಗಲೂ ಭಾರತಕ್ಕೆ ಚಿನ್ನದ ಪದಕ ತರುವುದು. ಇದು ಕೊನೆಯಲ್ಲ, ನಾನು ಮುಂದಿನ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ. ಈ ಪದಕದ ಬಣ್ಣವನ್ನು ಬದಲಾಯಿಸಬೇಕೆಂದಿದ್ದೇನೆ. ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುತ್ತೇನೆ. ರಿಂಗ್ಗೆ ಮರಳುವ ಮುನ್ನ ಒಂದೂವರೆ ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ವಿವರಿಸಿದರು.