ಕರ್ನಾಟಕ

karnataka

ETV Bharat / sports

'ತಿರಂಗದ ಮೇಲೆ ಆಟೋಗ್ರಾಫ್​ ಹಾಕಲಾರೆ': ಮೆಚ್ಚುಗೆ ಗಳಿಸಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ ನಡೆ - World Athletics Championships

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾ ಅವರಿಗೆ ಅಭಿಮಾನಿಯೊಬ್ಬರು ಭಾರತದ ಧ್ವಜದ ಮೇಲೆ ಆಟೋಗ್ರಾಫ್​ ಹಾಕುವಂತೆ ಕೇಳಿದ್ದಾರೆ. ಇದನ್ನು ನಯವಾಗಿಯೇ ನಿರಾಕರಿಸಿದ ನೀರಜ್, ಅಭಿಮಾನಿಯ ಟೀ ಶರ್ಟ್​ನ ತೋಳಿಗೆ ಸಹಿ ಹಾಕಿ ದೇಶಾಭಿಮಾನ ಮೆರೆದರು.

Neeraj
Neeraj

By ETV Bharat Karnataka Team

Published : Aug 28, 2023, 6:55 PM IST

ಬುಡಾಪೆಸ್ಟ್ (ಹಂಗೇರಿ): ನೀರಜ್ ಚೋಪ್ರಾ ಅವರಿಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀಟರ್​ ದೂರ ಚಾವೆಲಿನ್​ ಥ್ರೋ ಮಾಡಿ ಐತಿಹಾಸಿಕ ಸಾಧನೆಯೊಂದಿಗೆ ಮತ್ತೊಮ್ಮೆ ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ. ಈ ಸಾಧನೆಯ ಮೂಲಕ ಶತಕೋಟಿ ಅಭಿಮಾನಿಗಳ ಹೃದಯವನ್ನೂ ಚೋಪ್ರಾ ಗೆದ್ದರು. ಇದರ ಹೊರತಾಗಿ ಚೋಪ್ರಾ ನಡೆಯೊಂದು ಇನ್ನಷ್ಟು ಮೆಚ್ಚುಗೆ ಗಳಿಸಿದೆ.

ಹಂಗೇರಿಯಾದ ಅಭಿಮಾನಿಯೊಬ್ಬರು ನೀರಜ್‌ ಬಳಿ ಬಂದು ಭಾರತದ ತ್ರಿವರ್ಣ ಧ್ವಜದ ಮೇಲೆ ಆಟೋಗ್ರಾಫ್ ಹಾಕಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಗೌರವಪೂರ್ವಕವಾಗಿಯೇ ಅವರು ನಿರಾಕರಿಸಿದರು. "ವಹಾ ನಹಿ ಸೈನ್ ಕರ್ ಸಕ್ತಾ (ಅಲ್ಲಿ ಸಹಿ ಹಾಕಲು ಸಾಧ್ಯವಿಲ್ಲ)" ಎಂದು ಅವರು ಹೇಳಿದರು. ಭಾರತದ ಧ್ವಜ ಸಂಹಿತೆಯ 3.28ರ ಪ್ರಕಾರ, "ಧ್ವಜದ ಮೇಲೆ ಯಾವುದೇ ರೀತಿಯ ಅಕ್ಷರಗಳನ್ನು ಬರೆಯುವಂತಿಲ್ಲ".

ಇದೇ ವೇಳೆ, ನೀರಜ್​ ಚೋಪ್ರಾ ತಮ್ಮ ಅಭಿಮಾನಿಗೆ ಬೇಸರ ಉಂಟುಮಾಡಿಲ್ಲ. ಧ್ವಜಕ್ಕೆ ಬದಲಾಗಿ ಅವರು ಧರಿಸಿದ್ದ ಟಿ ಶರ್ಟ್​ನ ತೋಳಿನ ಮೇಲೆ ಸಹಿ ಹಾಕಿದರು. ಇದಕ್ಕೆ ಹಂಗೇರಿಯ ಅಭಿಮಾನಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತ ಜೋನಾಥನ್ ಸೆಲ್ವರಾಜ್ ಎಂಬವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್​) ಖಾತೆಯಲ್ಲಿ ಈ ವಿಚಾರವನ್ನು ಟ್ವೀಟ್​ ಮಾಡಿದ್ದಾರೆ.

ನೀರಜ್​ ಚೋಪ್ರಾರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ನೀರಜ್ ಚೋಪ್ರಾ ಹಾವಭಾವ ಬೆರಗುಗೊಳಿಸುತ್ತದೆ. ನಿಜವಾದ ಸ್ಫೂರ್ತಿ, ಭಾರತೀಯ ಧ್ವಜದ ಬಗ್ಗೆ ಅವರಿಗಿರುವ ಗೌರವ ಪ್ರಶಂಸನೀಯ" ಎಂದು ಶ್ಲಾಘಿಸಿ ಕಮೆಂಟ್​ಗಳನ್ನು ಮಾಡಲಾಗುತ್ತಿದೆ.

88.77 ಮೀಟರ್​ ದೂರ ಜಾವೆಲಿನ್‌ ಎಸೆದ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಫೈನಲ್​ ಮತ್ತು 2024ರ ಪ್ಯಾರಿಸ್​ ಒಲಿಂಪಿಕ್ಸ್​ಗೆ ಆಯ್ಕೆ ಆಗಿದ್ದರು. ಫೈನಲ್‌ನಲ್ಲಿ 6 ಅವಕಾಶಗಳ ಪೈಕಿ ಮೊದಲನೇ ಪ್ರಯತ್ನ ಫೌಲ್​ ಆಗಿತ್ತು. ಎರಡನೇ ಎಸೆತವನ್ನು 88.17 ಮೀ ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದುಕೊಂಡರು. ಮೂರನೇ ಪ್ರಯತ್ನದಲ್ಲಿ 86.32, 4ನೇ ಪ್ರಯತ್ನದಲ್ಲಿ 86.64 ಹಾಗೂ 5ನೇ ಪ್ರಯತ್ನದಲ್ಲಿ 87.73 ಮತ್ತು ಕೊನೆಯ ಪ್ರಯತ್ನದಲ್ಲಿ 83.98 ಮೀ ದೂರ ಎಸೆಯಲು ಸಾಧ್ಯವಾಯಿತು. ಆದರೆ ಚೋಪ್ರಾ ಎಸೆದ ಎರಡನೇ 88.17 ಮೀಟರ್​ ದೂರವನ್ನು ಯಾರಿಂದಲೂ ಮೀರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಭಾರತದ ಇನ್ನಿಬ್ಬರು ಪ್ರತಿಭೆಗಳು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಭಾಗವಹಿಸಿ 5 ಮತ್ತು 6ನೇ ಸ್ಥಾನ ಅಂಕರಿಸಿದ್ದಾರೆ. ಕಿಶೋರ್​ ಜೇನಾ ತಮ್ಮ ಐದನೇ ಎಸೆತದಲ್ಲಿ 84.77 ಮೀಟರ್​ ಮತ್ತು ಕರ್ನಾಟಕದ ಡಿ.ಪಿ.ಮನು ಆರನೇ ಪ್ರಯತ್ನದಲ್ಲಿ 84.14 ಮೀಟರ್​ ಜಾವೆಲಿನ್‌ ಎಸೆದು ಕ್ರಮವಾಗಿ 5 ಮತ್ತು 6ನೇ ಸ್ಥಾನ ಪಡೆದರು.

ಇದನ್ನೂ ಓದಿ:ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚೋಪ್ರಾ ಭರ್ಜರಿ ಸಾಧನೆ..

ABOUT THE AUTHOR

...view details