ಭುವನೇಶ್ವರ್ (ಒಡಿಶಾ): ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ 2023 ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ 2-0 ಗೋಲುಗಳಿಂದ ಲೆಬನಾನ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದಿತು. ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ತಮ್ಮ ವೈಯಕ್ತಿಕ 87ನೇ ಅಂತಾರಾಷ್ಟ್ರೀಯ ಗೋಲ್ ಗಳಿಸಿದರು. 46 ವರ್ಷಗಳ ಬಳಿಕ ಭಾರತ ಫುಟ್ಬಾಲ್ ಟೂರ್ನಿಯಲ್ಲಿ ಲೆಬನಾನ್ ತಂಡವನ್ನು ಸೋಲಿಸಿದ ದಾಖಲೆ ಬರೆಯಿತು. ಇದಕ್ಕೂ ಮೊದಲು 1977ರಲ್ಲಿ ತಂಡ ಮೊದಲ ಬಾರಿಗೆ ಲೆಬನಾನ್ ವಿರುದ್ಧ ಜಯಿಸಿತ್ತು. 2018ರಲ್ಲಿ ಭಾರತ ಮೊದಲ ಬಾರಿಗೆ ಇಂಟರ್ಕಾಂಟಿನೆಂಟಲ್ ಕಪ್ ಗೆದ್ದುಕೊಂಡಿತ್ತು.
ನಿನ್ನೆ ನಡೆದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಮತ್ತು ಲಾಲಿಯನ್ಜುವಾಲಾ ಚಾಂಗ್ಟೆ ದ್ವಿತೀಯಾರ್ಧದಲ್ಲಿ ಗೋಲ್ ಗಳಿಸಿದ್ದು ಭಾರತದ ಗೆಲುವಿನ ಕಾಣವಾಯಿತು. ಎದುರಾಳಿಗೆ ಒಂದು ಗೋಲ್ ಅನ್ನೂ ಗಳಿಸಲು ಭಾರತ ಅವಕಾಶ ನೀಡಲಿಲ್ಲ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾರತ ತಂಡಕ್ಕೆ ಪ್ರಶಸ್ತಿ ಹಸ್ತಾಂತರಿಸಿದ್ದಲ್ಲದೇ, ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಭಾರತ ಬಹುಮಾನವಾಗಿ 50,000 ಯುಎಸ್ಡಿ (41 ಲಕ್ಷ ರೂ.) ಗಳಿಸಿದರೆ, ಲೆಬನಾನ್ 25,000 ಯುಎಸ್ಡಿ (20.5 ಲಕ್ಷ) ಪಡೆದುಕೊಂಡಿತು. ಭಾರತದ ಡಿಫೆಂಡರ್ ಸಂದೇಶ್ ಜಿಂಗಾನ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂತು. 1.50 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.
ಪಂದ್ಯದಲ್ಲಿ ಲೆಬನಾನ್ ತೀವ್ರ ಪೈಪೋಟಿ ನೀಡಿತು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲ್ ಗಳಿಸಲಾಗಲಿಲ್ಲ. ಸಮಾನ ಬಲದಿಂದಾಗಿ ತಂಡಗಳು ಪ್ರಥಮ ಅವಧಿಯನ್ನು ಶೂನ್ಯ ಗೋಲ್ನಿಂದ ಅಂತ್ಯಗೊಳಿಸಿದವು. ಎರಡನೇ ಅವಧಿ ಆರಂಭವಾಗುತ್ತಿದ್ದಂತೆ ಛೆಟ್ರಿ ತಮ್ಮ ಅನುಭವವನ್ನೆಲ್ಲ ಧಾರೆಯೆರೆದರು. 46ನೇ ನಿಮಿಷದಲ್ಲಿ ಸುನಿಲ್ ಛೆಟ್ರಿ ತಮ್ಮ 87ನೇ ಅಂತಾರಾಷ್ಟ್ರೀಯ ಗೋಲು ಗಳಿಸುವುದರೊಂದಿಗೆ ಭಾರತ ದ್ವಿತೀಯಾರ್ಧದಲ್ಲಿ ಉತ್ತಮ ಆರಂಭ ಪಡೆದುಕೊಂಡಿತು.
ಪ್ರಥಮ ಗೋಲ್ನಿಂದ ಭಾರತ ತಂಡಕ್ಕೆ ಆತ್ಮವಿಶ್ವಸ ಹೆಚ್ಚಾಯಿತು. ಇದರಿಂದ ತಂಡ ಇನ್ನಷ್ಟು ಮುನ್ನುಗ್ಗಿ ಆಡಲು ಮುಂದಾಯಿತು. 66ನೇ ನಿಮಿಷದಲ್ಲಿ ನವೋರೆಮ್ ಮಹೇಶ್ ಸಿಂಗ್ ಬಾಕ್ಸ್ ಒಳಗಿನಿಂದ ಬಾಲ್ ಅನ್ನು ಗೋಲ್ ನೆಟ್ನೆಡೆಗೆ ವೇಗವಾಗಿ ಕಳಿಸಿದರು. ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಲೆಬನಾನಿನ ಗೋಲ್-ಕೀಪರ್ ಅಲಿ ಸಬೆ ಸೇವ್ ಮಾಡಿದರು. ಆದರೆ ಲಾಲಿಯನ್ಜುವಾಲಾ ಚಾಂಗ್ಟೆ ಅವರು ಗೋಲ್ ಕೀಪರ್ ತಡೆದ ಬಾಲ್ ಅನ್ನು ಮತ್ತೆ ಗೋಲ್ ಕೆಡೆಗೆ ಕಳುಹಿಸಿ ಎರಡನೇ ಗೋಲ್ ಪಡೆದುಕೊಂಡರು.
2021ರಲ್ಲಿ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಚಾಂಪಿಯನ್‌ಶಿಪ್ ಗೆದ್ದ ನಂತರ ಭಾರತೀಯ ಫುಟ್‌ಬಾಲ್ ತಂಡವು ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದಿದೆ. ಫಿಫಾ ಶ್ರೇಯಾಂಕದಲ್ಲಿ ಭಾರತ 106ನೇ ಸ್ಥಾನ ಹೊಂದಿದ್ದು, ಇದೀಗ 99ನೇ ಶ್ರೆಯಾಂಕದ ಲೆಬನಾನ್ ಅನ್ನು ಮಣಿಸಿದೆ.
ಇದನ್ನೂ ಓದಿ:Intercontinental Cup 2023: ವನವಾಟು ಮಣಿಸಿದ ಭಾರತ.. ಗೋಲ್ ಗಳಿಸಿ ಶುಭ ಸುದ್ದಿ ಹಂಚಿಕೊಂಡ ಚೆಟ್ರಿ