ನವದೆಹಲಿ:ಅಮೆರಿಕಾದ ಕನ್ಸಾಸ್ ಸ್ಟೇಟ್ ಯುನಿವರ್ಸಿಟಿಯನ್ನು ಪ್ರತಿನಿಧಿಸುತ್ತಿರುವ ಭಾರತದ ತೇಜಶ್ವಿನ್ ಶಂಕರ್ ಮ್ಯಾನಹ್ಯಾಟನ್ನಲ್ಲಿ ನಡೆದ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು ಸತತ ಎರಡನೇ ಬಾರಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
22 ವರ್ಷದ ಶಂಕರ್ ಶನಿವಾರ ನಡೆದ ಸ್ಪರ್ಧೆಯಲ್ಲಿ 2.28 ಮೀಟರ್ ಎತ್ತರ ಜಿಗಿಯುವ ಮೂಲಕ ಚಿನ್ನದ ಪದಕ ಪಡೆದರು. ಆದರೆ ಟೋಕಿಯೋ ಒಲಿಂಪಿಕ್ ಕೋಟಾವನ್ನು ಕೇವಲ 5 ಮೀಟರ್ ಅಂತರದಿಂದ ಇವರು ತಪ್ಪಿಸಿಕೊಂಡರು. ಟೋಕಿಯೋಗೆ ಅರ್ಹತೆ ಪಡೆಯಲು 2.33 ಮೀಟರ್ ಎತ್ತರ ಜಿಗಿಯಬೇಕಿತ್ತು.
ಶಂಕರ್ 2019ರಲ್ಲಿ ನಡೆದಿದ್ದ ಬಿಗ್ 12 ಔಟ್ ಡೋರ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ಸ್ನಲ್ಲೂ ಚಿನ್ನ ಗೆದ್ದಿದ್ದರು. 2020ರ ಪಂದ್ಯಾವಳಿ ಕೋವಿಡ್-19 ಕಾರಣದಿಂದ ರದ್ದಾಗಿತ್ತು.
ದೇಶಿಯ ದಾಖಲೆ ಹೊಂದಿರುವ ಶಂಕರ್ ಪ್ರಸ್ತುತ ಕನ್ಸಾಸ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪದವಿ ಆಧ್ಯಯನ ಮಾಡುತ್ತಿದ್ದಾರೆ. ಅವರು 4 ವರ್ಷದ ಸ್ಕಾಲರ್ಶಿಪ್ ಪಡೆದಿದ್ದು 2017ರಿಂದ ಅಲ್ಲೇ ಓದುತ್ತಿದ್ದಾರೆ.
ವೇಳಾಪಟ್ಟಿ ಗೊಂದಲದಿಂದ ಮಾರ್ಚ್‌ನಲ್ಲಿ ನಡೆದಿದ್ದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಂಕರ್ ಭಾಗವಹಿಸಿರಲಿಲ್ಲ. ಬದಲಾಗಿ ಎನ್‌ಸಿಎಎ ನ್ಯಾಷನಲ್ ಆಥ್ಲೆಟಿಕ್ ಅಸೋಸಿಯೇಷನ್ ಇಂಡೋರ್ ಸ್ಪರ್ಧೆಯಲ್ಲಿ 2.24 ಮೀಟರ್ ಜಿಗಿದು ಕಂಚು ಗೆದ್ದಿದ್ದರು. ಇವರು ಎನ್ಸಿಎಎನಲ್ಲಿ ಸ್ಪರ್ಧಿಸಿದ ಭಾರತದ 3ನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಈ ಮೊದಲು ಡಿಸ್ಕಸ್ ಥ್ರೋನಲ್ಲಿ ಕನ್ನಡಿಗ ವಿಕಾಸ ಗೌಡ ಮತ್ತು ತ್ರಿಪಲ್ ಜಂಪರ್ ಮೊಹಿಂದರ್ ಸಿಂಗ್ ಗಿಲ್ ಸ್ಪರ್ಧಿಸುವ ಅವಕಾಶ ಪಡೆದಿದ್ದರು.
ಇದನ್ನು ಓದಿ:ಇಟಾಲಿಯನ್ ಓಪನ್ ಟೈಟಲ್ಗಾಗಿ ಜೋಕೊವಿಕ್-ನಡಾಲ್ ನಡುವೆ ಬಿಗ್ ಫೈಟ್