ಕ್ಯಾಲ್ಗರಿ (ಕೆನಡಾ):ಭಾರತದ ಷಟ್ಲರ್‌ಲಕ್ಷ್ಯ ಸೇನ್ ಅವರು ಕೆನಡಾ ಓಪನ್ ಸೂಪರ್ 500 ಜಯಿಸಿದ್ದಾರೆ. ಭಾನುವಾರ ಕ್ಯಾಲ್ಗರಿಯಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 21-18, 22-20 ನೇರ ಸೆಟ್‌ಗಳಿಂದ ವಿಶ್ವದ 10ನೇ ಶ್ರೇಯಾಂಕದ ಚೀನಾ ಆಟಗಾರ ಲಿ ಶಿ ಫೆಂಗ್ ಅವರನ್ನು ಮಣಿಸಿದರು.
ಸೇನ್ ಫ್ಲಾಟ್ ಡ್ರೈವ್‌ಗಳಿಗೆ ಹೆಚ್ಚು ಮಹತ್ವ ನೀಡಿದರು. ಅವುಗಳಿಂದ ಹೆಚ್ಚಿನ ಸ್ಕೋರ್ಗಳನ್ನು ಸಾಧಿಸುತ್ತಾ ಮುನ್ನುಗ್ಗಿದರು. ಪ್ರತಿ ಶಾರ್ಟ್ ಲಿಫ್ಟ್‌ನಲ್ಲಿಯೂ ಬೌನ್ಸ್ ಮಾಡುತ್ತಾ ಎದುರಾಳಿ ಕಟ್ಟಿಹಾಕಿದರು. ನೆಟ್‌ನಲ್ಲಿ ಬಿಗಿ ಹೊಡೆತಗಳನ್ನು ಆಡಿದ ಸೇನ್, ಇಂಡಿಯಾ ಓಪನ್ ನಂತರ ತಮ್ಮ ವೃತ್ತಿಜೀವನದ ಎರಡನೇ ಸೂಪರ್ 500 ಪ್ರಶಸ್ತಿ ಗೆದ್ದು ಬೀಗಿದರು.
ಸೇನ್ ತಮ್ಮ ಆರಂಭಿಕ ಆಟದಲ್ಲಿ 6-2 ರಿಂದ ಮುನ್ನಡೆ ಸಾಧಿಸಿದರು. ಮೊದಲ ಸೆಟ್ನಲ್ಲಿ ಉತ್ತಮ ಅಂತರದ ಮುನ್ನಡೆ ಪಡೆದುಕೊಂಡಿದ್ದರು. 15ನೇ ಅಂಕ ಗಳಿಸುವಷ್ಟರಲ್ಲಿ ಚೀನಾದ ಆಟಗಾರ ಸಮಬಲ ಪಡೆದುಕೊಂಡರು. ಅಲ್ಲಿಂದ ಲಕ್ಷ್ಯ ಸೇನ್ ತಮ್ಮ ಫ್ಲಾಟ್ ಡ್ರೈವ್ಗಳ ಮೂಲಕ ಅಂಕಗಳ ಮುನ್ನಡೆ ಪಡೆದರು. 15ನೇ ಅಂಕದ ನಂತರ ವೇಗವಾಗಿ ಪಾಯಿಂಟ್ ಕಲೆ ಹಾಕಿದ ಸೇನ್ ಎದುರಾಳಿ 18 ಅಂಕ ಗಳಿಸುವಷ್ಟರಲ್ಲಿ ವಿಜಯದ ಅಂಕ ಪಡೆದು ಮೊದಲ ಸೆಟ್ ವಶಪಡಿಸಿಕೊಂಡರು.
ಎರಡನೇ ಸೆಟ್ನಲ್ಲಿ ಚೀನಿ ಆಟಗಾರ ಸೇನ್ಗೆ ಪ್ರತಿರೋಧವೊಡ್ಡಿದರು. ಲಿ ಶಿ ಫೆಂಗ್ ಮೊದಲ ಗೇಮ್ನ ವೀಕ್ನೆಸ್ಗಳನ್ನು ಕವರ್ ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ಸೇನ್ ತಮ್ಮ ಫ್ಲಾಟ್ ಶಾಟ್ಗಳ ಬಲದಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. 20-16ರ ಮುನ್ನಡೆ ಕಂಡುಕೊಂಡಿದ್ದ ಸೇನ್, ಎರಡನೇ ಗೇಮ್ ಅನ್ನು 22-20ರ ಅಂತರದಲ್ಲಿ ಜಯಿಸಿದರು. ಇದರಿಂದ ಎರಡು ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.
ಪಂದ್ಯದ ಗೆಲುವಿನ ನಂತರ ಟ್ವಿಟರ್ನಲ್ಲಿ ಸೇನ್, "ಕೆಲವೊಮ್ಮೆ ಕಠಿಣ ಸವಾಲುಗಳು ಸಿಹಿಯಾದ ವಿಜಯಗಳಿಗೆ ಕಾರಣವಾಗುತ್ತವೆ. ಪ್ರಶಸ್ತಿಯ ಕಾಯುವಿಕೆ ಮುಗಿದಿದೆ. ಕೆನಡಿಯನ್ ಓಪನ್ ವಿಜೇತ ಕಿರೀಟವನ್ನು ಅಲಂಕರಿಸಲು ನಾನು ಸಂತೋಷಪಡುತ್ತೇನೆ." ಎಂದು ಪೋಸ್ಟ್ ಮಾಡಿದ್ದಾರೆ.
ಕೆನಡಾ ಓಪನ್‌ನಲ್ಲಿ ಸೇನ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. 16ನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಬ್ರೆಜಿಲ್‌ನ ಯೊಗೊರ್ ಕೊಯೆಲೊ ಡಿ ಒಲಿವೇರಾ ಅವರನ್ನು ಎದುರಿಸಿದರು. ಸೇನ್ ವಿರುದ್ಧ 21-15 ಮತ್ತು 21-11 ರಲ್ಲಿ ಜಯಗಳಿಸಿದರು. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಅವರು ಜರ್ಮನಿಯ ಬ್ಯಾಡ್ಮಿಂಟನ್ ಆಟಗಾರ ಜೂಲಿಯನ್ ಕರಾಗ್ಗಿ ಅವರನ್ನು ಎದುರಿಸಿದರು. ಕೆನಡಾ ಓಪನ್‌ನಲ್ಲಿ ಮೂರನೇ ಸೆಟ್‌ಗೆ ಹೋದ ಲಕ್ಷ್ಯ ಸೇನ್ ಅವರ ಏಕೈಕ ಪಂದ್ಯ ಇದಾಗಿದೆ. ಸೇನ್ ಮೊದಲ ಸೆಟ್ 21-8, ಎರಡನೇ ಸೆಟ್ನಲ್ಲಿ 17-21 ಮತ್ತು ಕೊನೆಯ ಸೆಟ್ನಲ್ಲಿ 21-10ರಿಂದ ಗೆದ್ದುಕೊಂಡರು. ಸೆಮಿಫೈನಲ್‌ನಲ್ಲಿ 21 ವರ್ಷ ವಯಸ್ಸಿನವರು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-17 ಮತ್ತು 21-14 ರಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು.
ಇದನ್ನೂ ಓದಿ:Canada Open: ಫೈನಲ್‌ಗೆ ಲಗ್ಗೆ ಇಟ್ಟ ಲಕ್ಷ್ಯ ಸೇನ್, ಸೆಮೀಸ್‌ನಲ್ಲಿ ಸೋಲುಂಡ ಸಿಂಧು